ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.09 : ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಮತ್ತು ಬಸ್‍ಗಳ ಮೇಲಿರುವ ಆಂಗ್ಲ ಭಾಷೆಯ ನಾಮ ಫಲಕಗಳನ್ನು ಕೂಡಲೆ ತೆಗೆದು ಕನ್ನಡದಲ್ಲಿ ನಾಮ ಫಲಕಗಳನ್ನು ಬರೆಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಕನ್ನಡವನ್ನು ಶೇ.60 ರಷ್ಟು ಬಳಸುವಂತೆ ಸರ್ಕಾರದ ಆದೇಶವಿದ್ದರೂ ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ-ಕಾಲೇಜಗಳಲ್ಲಿ ಹಾಗೂ ಬಸ್‍ಗಳ ಮೇಲೆ ಇಂಗ್ಲಿಷ್ ನಾಮ ಫಲಕಗಳು ರಾರಾಜಿಸುತ್ತಿರುವುದು ಕನ್ನಡ ಭಾಷೆಗೆ ಅಪಮಾನವಾದಂತಾಗಿದೆ. ನಗರದ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಹತ್ತು ದಿನಗಳೊಳಗಾಗಿ ಕನ್ನಡ ನಾಮ ಫಲಕಗಳು ಇರಬೇಕು. ಇಲ್ಲದಿದ್ದಲ್ಲಿ ಅಂತಹ ನಾಮ ಫಲಕಗಳನ್ನು ಕಿತ್ತೆಸೆಯಲಾಗುವುದೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾ ಸಂಚಾಲಕ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಗರಾಧ್ಯಕ್ಷ ಅವಿನಾಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಖಿಲೇಶ್, ಮಹಮದ್ ರಫಿ, ಹರೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.