ರಾಘವೇಂದ್ರ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಸ್ಥನ್ಯಪಾನ ಸಪ್ತಾಹ
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 07 : ಕೋಟೆ ರಸ್ತೆಯಲ್ಲಿರುವ ರಾಘವೇಂದ್ರ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಸ್ಥನ್ಯಪಾನ ಸಪ್ತಾಹವನ್ನು ಗುರುವಾರ ಆಚರಿಸಲಾಯಿತು.
ರಾಘವೇಂದ್ರ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೆಚ್.ಶ್ರೀನಿವಾಸ್‍ರವರು ವಿಶ್ವ ಸ್ಥನ್ಯಪಾನ ಸಪ್ತಾಹ ಉದ್ಗಾಟಿಸಿ ಮಾತನಾಡುತ್ತ ಕನಿಷ್ಟ ಎರಡು ವರ್ಷಗಳ ಕಾಲ ತಾಯಿ ಮಗುವಿಗೆ ಎದೆಹಾಲು ಕುಡಿಸಬೇಕು. ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎದೆಹಾಲಿನಲ್ಲಿ ಪೌಷ್ಠಿಕಾಂಶವಿರುವ ಕಾರಣ ಯಾವುದೇ ಕಾರಣಕ್ಕೂ ತಾಯಂದಿರು ಮಕ್ಕಳಿಗೆ ಎದೆ ಹಾಲು ಉಣಿಸುವುದನ್ನು ನಿಲ್ಲಿಸಬಾರದೆಂದು ಹೇಳಿದರು.
ಸರ್ಕಾರಿ ನರ್ಸಿಂಗ್ ಶಾಲೆಯ ಪ್ರಾಂಶುಪಾಲರಾದ ರಾಜಯ್ಯ ಮಾತನಾಡಿ ಎದೆಹಾಲು ಉಣಿಸುವುದರಿಂದ ತಾಯಿಯಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ನಿರಂತರ ಸ್ಥನ್ಯಪಾನದಿಂದ ತಾಯಿ ಬೇಗನೆ ಗರ್ಭವತಿಯಾಗುವುದಿಲ್ಲ. ಸೌಂದರ್ಯವೂ ಹಾಳಾಗುವುದಿಲ್ಲ. ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಿ ಎದೆ ಹಾಲು ಉಣಿಸಬೇಕೆಂದು ತಿಳಿಸಿದರು.
ರಾಘವೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ ಮಾತನಾಡುತ್ತ ಆರು ತಿಂಗಳುಗಳ ಕಾಲ ಮಗುವಿಗೆ ತಾಯಿ ಎದೆಹಾಲನ್ನು ಬಿಟ್ಟು ಬೇರೆ ಏನನ್ನು ಕೊಡಬಾರದು. ನಂತರ ಹಾಲಿನ ಜೊತೆ ಪೂರಕ ಆಹಾರವನ್ನು ಮಗುವಿಗೆ ನೀಡುವುದು ಒಳ್ಳೆಯದು. ಎದೆಹಾಲು ಮಗುವಿಗೆ ಜೀವರಕ್ಷಕ ಲಸಿಕೆಯಿದ್ದಂತೆ ಎಂದು ಎದೆಹಾಲಿನ ಮಹತ್ವ ತಿಳಿಸಿದರು.
ಮೋನಿಕಾ, ಪ್ರೇಮ, ಗಾಯಿತ್ರಮ್ಮ, ಉಮ್ರಾಜ್, ಉಪನ್ಯಾಸಕರು ಸ್ತನ್ಯಪಾನ ಸಪ್ತಾಹದಲ್ಲಿ ಭಾಗವಹಿಸಿದ್ದರು.
ನರ್ಸಿಂಗ್ ವಿದ್ಯಾರ್ಥಿಗಳು ಸ್ತನ್ಯಪಾನ ಮಹತ್ವದ ಕುರಿತು ಕಿರುನಾಟಕ ಪ್ರದರ್ಶಿಸಿದರು.






