ಡಿಸಿಎಂ ಡಿಕೆ ಶಿವಕುಮಾರ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಕೇಸ್ ವಾಪಾಸ್ ಪಡೆದಿದ್ದರ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ರಾಜ್ಯ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಸಂವಿಧಾನ ಬಾಹಿರವಾಗಿದೆ ಎಂದೇ ಕಿಡಿಕಾರಿದ್ದಾರೆ.
ಇದು ರಾಜಕೀಯ ದುರುದ್ದೇಶಗಳಿಂದ ಕೂಡಿದೆ. ಡಿಕೆ ಶಿವಕುಮಾರ್ ಅವರು ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವೂ 2019ರಲ್ಲಿ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಒಮ್ಮೆ ತನಿಖೆಗೆ ನೀಡಿದ್ದ ಪ್ರಕರಣವನ್ನು ಹಿಂಪಡೆಯಲು ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ಕೂಡ ಇದೇ ರೀತಿ ಯಡಿಯೂರಪ್ಪ ಹಾಗೂ ಜನಾರ್ದನ ರೆಡ್ಡಿ ಪ್ರಕರಣಗಳನ್ನು ತನಿಖೆಗೆ ನೀಡಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಪ್ರಕರಣಗಳನ್ನು ಹಿಂಪಡೆಯುವ ಕೆಲಸ ಮಾಡಲಿಲ್ಲ. ಈ ಸರ್ಕಾರ ತಮಗೆ ತೋಚುವ ರೀತಿ ಮಾಡುವ ಮೂಲಕ ನ್ಯಾಯಾಂಗದ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಸರ್ಕಾರದ ಕ್ರಮವನ್ನು ವಿರೋಧಿಸಿ ನಿಲುವಳಿ ಸೂಚನೆ ಮಂಡನೆಗೆ ಪ್ರಯತ್ನ ನಡೆಸಿದರು. ಬಿಜೆಪಿಯ ಎಲ್ಲಾ ಶಾಸಕರು ದನಿಗೂಡಿಸಿ ಈ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಒಪ್ಪಂದ ಸ್ಪೀಕರ್ ಖಾದರ್ ಅವರು ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಇದೆ ಎಂದು ಅವಕಾಶ ನಿರಾಕರಿಸಿದರು. ಸ್ಪೀಕರ್ ಈ ಸಂಬಂಧ ಚರ್ಚೆಗೆ ಅವಕಾಶ ನೀಡಲಿಲ್ಲ. ಬಿಜೆಪಿ ನಾಯಕರು ಅವಕಾಶ ನೀಡುವಂತೆ ಸ್ಪೀಕರ್ ಬಳಿ ಕೇಳಿದರು.