ಚಿತ್ರದುರ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 150 ಸ್ಥಾನಗಳನ್ನು ಗೆಲ್ಲಬೇಕಾಗಿರುವುದರಿಂದ ಕಾರ್ಯಕರ್ತರು ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ಜಗಳೂರು ಮಹಾಲಿಂಗಪ್ಪ ಕಾಂಪ್ಲೆಕ್ಸ್‍ನಲ್ಲಿರುವ ಸಭಾಂಗಣದಲ್ಲಿ ಮಂಗಳವಾರ ನಡೆದ ಭಾರತೀಯ ಜನತಾಪಾರ್ಟಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳು ವಿಧಾನಸಭೆ ಚುನಾವಣೆಗೆ ಬುನಾದಿಯಿದ್ದಂತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳ್ಳೊಳ್ಳೆ ಯೋಜನೆಗಳನ್ನು ಜನತೆಗೆ ನೀಡಿರುವುದರಿಂದ ಕಾರ್ಯಕರ್ತರು ಯಾರು ಮುಜುಗರಪಟ್ಟುಕೊಳ್ಳುವುದು ಬೇಡ. ಧೈರ್ಯವಾಗಿ ಮತದಾರರ ಬಳಿ ಹೋಗಿ ಚುನಾವಣೆಯಲ್ಲಿ ಪಕ್ಷದ ಪರವಾಗಿ ಮತ ಕೇಳಿ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ಸುಲಭವಾಗಲಿದೆ. ಪ್ರಧಾನಿ ಮೋದಿರವರು ಬಡವರಿಗೆ ಸಾಕಷ್ಟು ಮನೆಗಳನ್ನು ನೀಡಿದ್ದಾರೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ರಾಜ್ಯದೆಲ್ಲೆಡೆ ಬಡವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್‍ಗಳನ್ನು ಕೊರೆಸಿದ್ದಾರೆ.
ಕೊರೋನಾದಲ್ಲಿ 197 ಕೋಟಿ ಡೋಸ್ ಲಸಿಕೆಯನ್ನು ದೇಶದ ಜನತೆಗೆ ನೀಡಿದ್ದರ ಫಲವಾಗಿ ಸಾವು-ನೋವಿನ ಸಂಖ್ಯೆ ಏರಿಕೆಯಾಗಿಲ್ಲ. ಇದಕ್ಕೆ ಪ್ರಧಾನಿರವರಿಗೆ ಇರುವ ಕಾಳಜಿ ಕಾರಣ ಎಂದು ಹೇಳಿದರು.
ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಆರ್ಥಿಕವಾಗಿ ದಿವಾಳಿಯಾಗಿದೆ. ನಮ್ಮ ದೇಶ ಚೀನಾಕ್ಕಿಂತ ಆರ್ಥಿಕವಾಗಿ ಸದೃಢವಾಗಿದೆ. ಕೊರೋನಾದಲ್ಲಿ ಯಾರು ಹಸಿವಿನಿಂದ ಬಳಲಬಾರದೆಂದು 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ ಬೇಳೆ ನೀಡಿದೆ. ಮುಂದುವರೆದ ದೇಶಗಳು ಜನರಿಗೆ ಲಸಿಕೆ ನೀಡಲು ಆಗುತ್ತಿಲ್ಲ. ರೈತರ ಗೊಬ್ಬರಕ್ಕೆ ಸಬ್ಸಿಡಿ ನೀಡಿದೆ. ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಪರಿಹಾರ ಒದಗಿಸಿದೆ. ಅಪ್ಪರ್ ಭದ್ರಾದಿಂದ ವಿ.ವಿ.ಸಾಗರಕ್ಕೆ ನೀರು ಬಂದಿದೆ. ಭದ್ರಾಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದೆ. ಇವೆಲ್ಲಾ ಸಾಧನೆಯಲ್ಲವೇನು ಎಂದು ಪ್ರಶ್ನಿಸಿದರು.
ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ವಿಸ್ತಾರಕ ಯೋಜನೆಯಡಿಯಲ್ಲಿ ಪ್ರತಿ ಬೂತ್‍ನಲ್ಲಿ ಬೂತ್ ಸಮಿತಿ ಸಶಕ್ತೀಕರಣವಾಗಬೇಕು. ಒಂದು ಗ್ರಾಮ ಪಂಚಾಯಿತಿಗೆ ಒಬ್ಬ ಪದಾಧಿಕಾರಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಬೂತ್ ಸಮಿತಿ ಪರಿಶೀಲನೆ ಮುಖ್ಯ. ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿಯ ಪೂರ್ಣ ಇತಿಹಾಸ ನಿಮ್ಮಲ್ಲಿರಬೇಕು. ಮಂಡಲ ಪದಾಧಿಕಾರಿಗಳು ಪ್ರವಾಸ ಮಾಡಬೇಕು. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇದರಿಂದ ಶಕ್ತಿ ಕೇಂದ್ರ, ಬೂತ್ ಸಮಿತಿಗಳ ಭೇಟಿಯಾಗುತ್ತದೆ ಎಂದು ಹೇಳಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಮಾತನಾಡುತ್ತ ಪ್ರಧಾನಿ ಮೋದಿ ನಾಯಕತ್ವದಲ್ಲಿ ಸಾಮಾಜಿಕ, ಆರ್ಥಿಕ, ಭೌಗೋಳಿಕ ಭದ್ರೆತೆಯಲ್ಲಿ ದೇಶದ ಜನ ಬದುಕುತ್ತಿದ್ದಾರೆ. ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ.ಮಾತ್ರ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸಿದ್ದಾಂತ ನಮ್ಮ ಪಕ್ಷಕ್ಕಿದೆ. ಗಣಿಗಾರಿಕೆಯಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ 25 ಸಾವಿರ ಕೋಟಿ ರೂ.ಗಳನ್ನು ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಗಣಿಭಾದಿತ ಪ್ರದೇಶಗಳ ಅಭಿವೃದ್ದಿಗೆ ಬಳಸುವಂತೆ ಸುಪ್ರಿಂಕೋರ್ಟ್ ಸೂಚಿಸಿದೆ. ರೈಲ್ವೆ ವ್ಯಾಗನ್ ಮೂಲಕ ಅದಿರು ಸಾಗಾಣೆಯಾಗುವಂತೆ ಗಣಿಗಾರಿಕೆ ಸಚಿವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ರಾಜೇಶ್‍ಬುರುಡೆಕಟ್ಟೆ ವೇದಿಕೆಯಲ್ಲಿದ್ದರು.
ಜಿಲ್ಲಾ ಪದಾಧಿಕಾರಿಗಳು, ಮೋರ್ಚ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.