ಚಿತ್ರದುರ್ಗ, (ಮೇ.24) : ಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಕಾರ್ಮಿಕರು ಆರೋಗ್ಯ ತಪಾಸಣೆ ಹಾಗೂ ತರಬೇತಿ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆ, ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ನೊಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅದರಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆಯು ಒಂದಾಗಿದ್ದು, ಗ್ರಾಮೀಣ, ಪಟ್ಟಣ ಮತ್ತು ನಗರ ಸೇರಿದಂತೆ ಎಲ್ಲ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೂ ಸರ್ಕಾರ ಪಿಂಚಣಿ ಸೌಲಭ್ಯ, ಕಾರ್ಮಿಕ ಗೃಹ ಭಾಗ್ಯ, ಹೆರಿಗೆ ಸೌಲಭ್ಯ, ಶಿಶು ಪಾಲನ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ವೈದ್ಯಕೀಯ ವೆಚ್ಚ, ಮದುವೆ ಸಹಾಯಧನ, ಬಸ್ ಸೌಲಭ್ಯ ಸೇರಿದಂತೆ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ 18ಕ್ಕೂ ಹೆಚ್ಚು ವಿವಿಧ ಬಗೆಯ ಸೌಲಭ್ಯಗಳನ್ನು ಸರ್ಕಾರ ನೀಡಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೆ ಲಕ್ಷಗಟ್ಟಲೆ ಹಣ ವ್ಯಯವಾಗುತ್ತದೆ. ಆದರೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕಾರ್ಮಿಕರ ಮನೆ ಬಾಗಿಲಿಗೆ ಭೇಟಿ ನೀಡಿ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ಚಿತ್ರದುರ್ಗ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ ಮಾತನಾಡಿ, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 36,939 ಮಂದಿ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲು ಬಸಪ್ಪ ಮಲ್ಟಿ ಸ್ಪೆಷಾಲಿಟಿ ಕಾರ್ಯಾದೇಶ ನೀಡಲಾಗಿದ್ದು, ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿಯವರು ಕಾರ್ಮಿಕರು ಆರೋಗ್ಯ ತಪಾಸಣೆ ನಡೆಸಲಿದ್ದು, ವೈದ್ಯರ ಸಮಾಲೋಚನೆ, ಲಿವರ್ ಕಾರ್ಯ ಪರೀಕ್ಷೆ, ಅಡಿಯೋಮೆಟ್ರಿ ಸ್ಕ್ರೀನ್ ಟೆಸ್ಟ್, ದೃಷ್ಠಿ ತಪಾಸಣೆ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಆರೋಗ್ಯ ತಪಾಸಣೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.
ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 2021ರ ಏಪ್ರಿಲ್ 01 ರಿಂದ 2022ರ ಮಾರ್ಚ್ 31ರವರೆಗೆ 4,47,65,000/- ರೂಗಳ (ನಾಲ್ಕು ಕೋಟಿ ನಲವತ್ತೇಳು ಲಕ್ಷದ ಅರವತ್ತೈದು ಸಾವಿರ) ಧನ ಸಹಾಯವನ್ನು ನೀಡಲಾಗಿದೆ.
ಶೈಕ್ಷಣಿಕ ಧನಸಹಾಯ ಯೋಜನೆಯಡಿ 53 ಫಲಾನುಭವಿಗಳು, ಅಪಘಾತ ಮರಣ ಧನಸಹಾಯ-4 ಫಲಾನುಭವಿಗಳು, 119 ಮಂದಿಗೆ ಸ್ವಾಭಾವಿಕ ಮರಣ ಧನಸಹಾಯ, 137 ಮಂದಿಗೆ ಹೆರಿಗೆ ಧನ ಸಹಾಯ, 22 ಮಂದಿಗೆ ದುರ್ಬಲತೆ ಪಿಂಚಣಿ, 69 ಮಂದಿಗೆ ವೈದ್ಯಕೀಯ ಧನಸಹಾಯ, 42 ಮಂದಿಗೆ ನಿವೃತ್ತ ಪಿಂಚಣಿ, ತಾಯಿ-ಮಗು ಸಹಾಯ ಹಸ್ತ ಧನಸಹಾಯ ಯೋಜನೆಯಡಿಯಲ್ಲಿ 137 ಫಲಾನುಭವಿಗಳು ಹಾಗೂ 360 ಮಂದಿಗೆ ಮದುವೆ ಧನಸಹಾಯ ನೀಡಲಾಗಿದೆ ಎಂದು ತಿಳಿಸಿದರು.
ನೊಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವಲಂಬಿತರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದೇ ಸಂದರ್ಭದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಾಂಕೇತಿಕವಾಗಿ ಇಬ್ಬರು ಫಲಾನುಭವಿಗಳಿಗೆ ಕಬ್ಬಿಣ ಕಟ್ಟುವ ಬಾರ್ ಬೆಂಡಿಂಗ್ ಟೂಲ್ ಕಿಟ್ ವಿತರಿಸಲಾಯಿತು. ಚಿತ್ರದುರ್ಗ ತಾಲ್ಲೂಕಿನಲ್ಲಿ ಒಟ್ಟು 185 ಫಲಾನುಭವಿಗಳು ಬಾರ್ ಬೆಂಡಿಂಗ್ ಟೂಲ್ ಕಿಟ್‍ಗೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಹರೀಶ್, ವೆಂಕಟೇಶ್, ಬಸಪ್ಪ ಆಸ್ಪತ್ರೆಯ ಮುಖ್ಯಸ್ಥ ಡಾ.ರಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಧನಂಜಯ್, ಕಂದಾಯ ನಿರೀಕ್ಷಕ ಶರಣಪ್ಪ, ಕಾರ್ಮಿಕ ಇಲಾಖೆ ವಿಷಯ ನಿರ್ವಾಹಕ ತೀರ್ಥ ಪ್ರಸಾದ್, ಬಾಲಕಾರ್ಮಿಕ ಯೋಜನೆ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್, ಸಮೃದ್ಧಿ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಮುಖಂಡಾದ ಬೈರೇಶ್, ಶಿವಣ್ಣ, ಮಹಂತೇಶ್, ಯಲ್ಲಪ್ಪ ಸೇರಿದಂತೆ ಮತ್ತಿತರರು ಇದ್ದರು.