ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.30): ಹಾಲಿದ್ದಾಗ ಹಬ್ಬ ಮಾಡು, ಅಧಿಕಾರ ಇದ್ದಾಗ ಕೆಲಸ ಮಾಡು ಎಂದು ನಮ್ಮಪ್ಪ ಅಮ್ಮ ಹೇಳಿಕೊಟ್ಟಿದ್ದಾರೆ. ಅದರಂತೆ ಕ್ಷೇತ್ರದ ಜನತೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಭಾನುವಾರ ಹಿರೇಗೆಂಪ್ಪಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಗ್ರಾಮಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ.
ಆಂಜನೇಯಸ್ವಾಮಿ, ಗಣಪತಿ, ಬೈರಪ್ಪನ ದೇವಸ್ಥಾನದ ಅಭಿವೃದ್ದಿಗೆ ಹಣ ನೀಡಿದ್ದೇನೆ. ಸ್ಮಶಾನಕ್ಕೆ ಜಾಗ ಮೀಸಲಿಡುವ ಕೆಲಸವನ್ನು ಮಾಡುವುದಾಗಿ ಭರವಸೆ ನೀಡಿದ ಶಾಸಕ ಎಂ.ಚಂದ್ರಪ್ಪ ಬೆಳೆ ಹಾನಿಯಿಂದಾಗಿ ಜಾಲಿಕಟ್ಟೆ ಗ್ರಾಮದ ರೈತರಿಗೆ ಪರಿಹಾರದ ಹಣ ಬರುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ಕೊರೆಸಲು ಆಗುತ್ತಿಲ್ಲ. ಇನ್ನೊಂದು ತಿಂಗಳೊಳಗೆ ಎಲ್ಲಾ ಸಾಗುವಳಿದಾರರಿಗೂ ಸಾಗುವಳಿ ಚೀಟಿ ಕೊಡಿಸುವ ಕೆಲಸ ಮಾಡುತ್ತೇನೆ. ಅಧಿಕಾರ ಶಾಶ್ವತವಲ್ಲ. ಇಂದು ಇರುತ್ತೆ ನಾಳೆ ಹೋಗುತ್ತೆ. ಆದರೆ ಶಾಸಕನಾಗಿದ್ದಾಗ ಏನು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎನ್ನುವುದು ಮುಖ್ಯ.
ಹಾಗಾಗಿ ಮತದಾರರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಕೆರೆಕಟ್ಟೆ, ಚೆಕ್‍ಡ್ಯಾಂ, ಆಸ್ಪತ್ರೆ, ಶಾಲೆಗಳನ್ನು ಕಟ್ಟಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಮತದಾರರ ಮುಲಾಜಿ ಒಳಗಾಗಿ ಕೆಲಸ ಮಾಡುತ್ತೇನೆಯೇ ವಿನಃ ಬೇರೆ ಯಾರ ಮುಲಾಜಿಗೂ ಒಳಪಡುವುದಿಲ್ಲ ಎಂದು ನೇರವಾಗಿ ನುಡಿದರು.
ಬೆಂಕಿಕೆರೆ, ಮಧುರೆ, ಪಂಡರಹಳ್ಳಿಯಿಂದ ಒಂದೊಂದು ಲೈನ್ ತಂದು 30 ಮೆ.ವ್ಯಾ.ಇದ್ದ ವಿದ್ಯತ್‍ನ್ನು ಎಪ್ಪತ್ತು ಮೆ.ವ್ಯಾ.ಗೆ ಹೆಚ್ಚಿಸಿದ್ದೇನೆ. ಇದರಿಂದ ಇನ್ನು 25 ವರ್ಷಗಳ ಕಾಲ ದಿನಕ್ಕೆ ಏಳು ಗಂಟೆ ವಿದ್ಯುತ್ ನೀಡುತ್ತೇನೆ. ರೈತರಿಗೆ ಕರೆಂಟ್ ಅಭಾವವಿರುವುದಿಲ್ಲ.
ಜೋಗ್‍ಫಾಲ್ಸ್‍ನಿಂದ ನೇರವಾಗಿ ವಿದ್ಯುತ್ ಪಡೆಯಲು ಚಿಕ್ಕಜಾಜೂರು ಸಮೀಪದ ಕೋಟೆಹಾಳ್ ಬಳಿಯಿರುವ ರೇಷ್ಮೆ ಇಲಾಖೆಗೆ ಸೇರಿದ ಹನ್ನೆರಡು ಎಕರೆ ಜಾಗದಲ್ಲಿ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಸ್ಟೇಷನ್ ನಿರ್ಮಿಸಿ ಸಬ್‍ಸ್ಟೇಷನ್‍ಗಳಿಗೆ ಪೂರೈಸಲಾಗುವುದು. ಇನ್ನು ನೂರು ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ ಎಂದರು.
ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದವಾದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಿಂದ 367 ಕೋಟಿ ರೂ.ವೆಚ್ಚದಲ್ಲಿ ನೇರವಾಗಿ ನೀರು ತರಲಾಗುವುದು. ಅದಕ್ಕಾಗಿ ಗಟ್ಟಿಹೊಸಹಳ್ಳಿ ಸಮೀಪ ಗುಡ್ಡದ ಮೇಲೆ ಎಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಮುಂದಿನ 30 ವರ್ಷಗಳ ಜನಗಣತಿಯನ್ನು ಗಮನದಲ್ಲಿಟ್ಟುಕೊಂಡು ನೀರು ಕೊಡುತ್ತೇನೆಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಲಿತಮ್ಮ, ಉಪಾಧ್ಯಕ್ಷ ಬಸವರಾಜ್, ಗುಡಿಗೌಡ್ರು ಕೆಂಚಪ್ಪ, ಗುಡಿಗೌಡ್ರು ಗುಮ್ಮಣ್ಣ, ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಂಗಣ್ಣ, ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ಸುಮ ಹಳ್ಳಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದೀಪಕ್, ಮರಿಗೆಂಚಪ್ಪ, ಶ್ರೀಮತಿ ಸಾಕಮ್ಮ, ರೇವಣಸಿದ್ದ ಒಡೆಯರ್, ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.