ತಾಯಿ ಮರಣ, ಶಿಶು ಮರಣ ನಿಯಂತ್ರಿಸುವತ್ತ ಕಾರ್ಯೋನ್ಮುಖರಾಗಿ : ಡಾ.ಜಿ.ಪಿ.ರೇಣುಪ್ರಸಾದ್

2 Min Read

ಚಿತ್ರದುರ್ಗ. ಮಾ.05 : ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತರಬೇತಿಯ ಪ್ರಯೋಜನ ಪಡೆದು ತಾಯಿ ಮರಣ, ಶಿಶುಮರಣ ನಿಯಂತ್ರಿಸುವತ್ತ ಕಾರ್ಯೋನ್ಮುಖರಾಗಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದರು.

 

ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ಸಭಾಂಗಣದಲ್ಲಿ ಬುಧವಾರತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಕೆಎಚ್‍ಪಿಟಿ ಸಹಯೋಗದೊಂದಿಗೆ ಐಸಿಎಂಆರ್ ಕಾರ್ ಪ್ರಾಜೆಕ್ಟ್ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿ ಕಾರ್ಯಗಾರದಲ್ಲಿ ತಾಯಿ ಮರಣ, ಶಿಶುಮರಣ ಕುರಿತು ಸಮಗ್ರವಾಗಿ ಚರ್ಚೆಯಾಗಲಿ. ಮಕ್ಕಳ ಅಪೌಷ್ಟಿಕತೆ ಸರಿದೂಗಿಸುವಿಕೆ ನಿಟ್ಟಿನಲ್ಲಿ ಕ್ಷೇತ್ರ ಮಟ್ಟದ ವೈದ್ಯಾಧಿಕಾರಿಗಳು, ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ರಾಷ್ಟ್ರೀಯ  ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ತರಬೇತಿಯ ಪ್ರಯೋಜನ ಪಡೆದು ಶಿಶು ಮರಣ ದರ,  ತಾಯಿ ಮರಣ ದರ ನಿಯಂತ್ರಿಸಲು ಸೂಕ್ತ ಯೋಜನೆ ತಯಾರಿಸಿ ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಡಿ.ಎಂ.ಅಭಿನವ ಮಾತನಾಡಿ, ರಾಜ್ಯಮಟ್ಟದಿಂದ ಕಟ್ಟ ಕಡೆಯ ಫಲಾನುಭವಿಯವರೆಗೂ ಎಲ್ಲರೂ ಈ ಯೋಜನೆಯ ಭಾಗಿದಾರರಾಗಿರುತ್ತೀರಾ.  ಕಟ್ಟ ಕಡೆಯ ಫಲಾನುಭವಿಗೂ ಸೇವೆಯ ಸದುಪಯೋಗ ತಲುಪಬೇಕು. ಈ ಪೂರ್ವ ಸಿದ್ಧತಾ ತರಬೇತಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ತಮಗೆ ಕಂಡುಬರುವ ಸಮಸ್ಯೆಗಳು, ಅನುಮಾನಗಳು, ಪ್ರಶ್ನೆಗಳನ್ನು ಚರ್ಚಿಸುವ ಮೂಲಕ ಉತ್ತರ ಕಂಡುಕೊಳ್ಳಿ. ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ತೊಲಗಿಸೋಣ ತಾಯಿ ಮರಣ, ಶಿಶು ಮರಣ ತಪ್ಪಿಸೋಣ ಎಂದರು.
ಸೆಂಟ್ ಜಾನ್ಸ್ ಆಸ್ಪತ್ರೆಯ ಡಾ.ಆಯಿಷಾ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಜ್ಯೋತಿ, ಡಾ.ಶಶಿಕಿರಣ್, ಚಿತ್ರದುರ್ಗ ಐಸಿಎಂಆರ್ ಪ್ರಾಜೆಕ್ಟ್‍ನ ಸಂಯೋಜಕಿ ಬಿ.ವೀಣಾ, ಪೋಷಣ್ ಅಭಿಯಾನದ ಜಿಲ್ಲಾ ವ್ಯವಸ್ಥಾಪಕ ಕರ್ಕಪ್ಪ ಮೇಟಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಬಿ.ಜಾನಕಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಕೆಎಚ್‍ಪಿಟಿ ಮೇಲ್ವಿಚಾರಕರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *