ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 25 :

ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮಾತ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಕೂಡಾ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ನಿನ್ನೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಬಹುತೇಕ ಎಲ್ಲಾ ಶಾಸಕರು ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ ಎಂದು ಸಚಿವ ಡಿ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಕೆಡಿಪಿ ಸಭೆಯಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಸೂಚಿಸಿದ್ದರೂ ಸಹ ಸರಿಯಾಗಿ ಕೆಲಸ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಮಾರ್ಚ್ ಮಾಹೆಯ ಅಂತ್ಯದೊಳಗೆ ಜಿಲ್ಲೆಯ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ನಿಗದಿತ ಅವಧಿಯೊಳಗೆ ರಸ್ತೆ ಗುಂಡಿಗಳನ್ನು ಮುಚ್ಚದಿದ್ದಲ್ಲಿ, ಕಡ್ಡಾಯ ರಜೆಗೆ ಕಳುಹಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ:
ಬೇಸಿಗೆ ಪ್ರಾರಂಭವಾಗಿರುವುದರಿಂದ ವಿದ್ಯುತ್ ಪೂರೈಕೆ ಸಂಬಂಧ ವಿವಿಧೆಡೆಯಿಂದ ಸಾಕಷ್ಟು ದೂರುಗಳು ಬರುತ್ತಿವೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಶಿಷ್ಠಾಚಾರ ಪಾಲನೆ ಮಾಡಬೇಕು. ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮವಹಿಸಬೇಕು ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ತಿಮ್ಮರಾಯಪ್ಪ ಅವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು, ಇನ್ನೊಂದು ಬಾರಿ ನಿಮ್ಮ ಮೇಲೆ ದೂರುಗಳು ಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ:
ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಬಿ.ಜಿ.ಗೋವಿಂದಪ್ಪ ಹಾಗೂ ಶಾಸಕ ಟಿ.ರಘುಮೂರ್ತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಸಿಗೆಯ ಸಂದರ್ಭದಲ್ಲಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉತ್ತರಿಸಲು ಆಗುತ್ತಿಲ್ಲ. ಶೀಘ್ರವಾಗಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹೇಗೆ? ನೀವು ಪೂರ್ಣಗೊಳಿಸುತ್ತಿಲ್ಲ, ನಾವು ಜನರಿಂದ ಹೇಳಿಸಿಕೊಳ್ಳುವುದು ತಪ್ಪುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರ ತೀವ್ರ ಅಸಮಾಧಾನ :
ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಎಸ್.ಸಿ ಹಾಗೂ ಎಸ್.ಟಿ ಜನರು ಹೆಚ್ಚಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಬದ್ದತೆ ಇಲ್ಲದಂತಾಗಿದೆ. ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡಲು ಇಷ್ಟವಿರದ ಅಧಿಕಾರಿಗಳು ಕಡ್ಡಾಯ ರಜೆಯ ಮೇಲೆ ತೆರಳಿ, ಇಲ್ಲವಾದರೆ ವರ್ಗಾವಣೆ ತೆಗೆದುಕೊಂಡು ಜಿಲ್ಲೆಯಿಂದ ನಿರ್ಗಮಿಸಿ ಎಂದು ಸಚಿವ ಡಿ.ಸುಧಾಕರ್ ಖಡಕ್ ಸೂಚನೆ ನೀಡಿದರು.
2022-23ನ ಸಾಲಿನಲ್ಲಿಯೇ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ನರೇಗಾ ಪರಿವರ್ತನೆಯಡಿ ಹಿರಿಯೂರು ಕ್ಷೇತ್ರದಲ್ಲಿ ಮಂಜೂರಾದ ಶಾಲೆ, ಅಂಗನವಾಡಿ ಹಾಗೂ ಶೌಚಾಲಯ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಸ್ಥಳಗಳಲ್ಲಿ ಕಾಮಗಾರಿಗಳನ್ನು ಆರಂಭಿಸಿಲ್ಲ. ಅಭಿವೃದ್ಧಿ ಮಾಡುತ್ತಾರೆ ಎಂದು ಭಾವಿಸಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ಉತ್ತರ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

