ಚಿತ್ರದುರ್ಗ : ಅಗತ್ಯ ವಸ್ತುಗಳ ಬೆಲೆ ಏರಿಸಿ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ.ಸರ್ಕಾರದ ವಿರುದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಡು ವೃತ್ತದಲ್ಲಿಯೇ ಸೌದೆ ಒಲೆ ಹಚ್ಚಿ ಹಾಲು ಕಾಯಿಸುವ ಮೂಲಕ ಅಡುಗೆ ಅನಿಲದ ಬೆಲೆ ಏರಿಸಿ ಮಹಿಳೆಯರಿಗೆ ತೊಂದರೆಯುಂಟು ಮಾಡಿರುವ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ವಿರುದ್ದ ಮಹಿಳೆಯರು ಧಿಕ್ಕಾರಗಳನ್ನು ಕೂಗಿದರು.
2014 ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ಇಲ್ಲ ಸಲ್ಲದ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ಇದುವರೆವಿಗೂ ಯಾವ ಭರವಸೆಯನ್ನು ಈಡೇರಿಸದೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿರುವುದೇ ಸಾಧನೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶದಲ್ಲಿರುವ ಕಪ್ಪು ಹಣ ತಂದು ಭಾರತದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಹೇಳಿದ ಪ್ರಧಾನಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವಕರನ್ನು ನಂಬಿಸಿ ಕೊನೆಗೆ ಪಕೋಡ ಮಾರಿ ಎಂದು ಅವಮಾನಿಸಿದರು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿಯೂ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರ ಅವೈಜ್ಞಾನಿಕ ಬೆಲೆ ಏರಿಕೆ ನೀತಿಯನ್ನು ಕೈಬಿಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ ಎಚ್ಚರಿಸಿದರು.
ದೇಶದ ಜನರ ಬಗ್ಗೆ ಕಾಳಜಿ ಹಾಗೂ ಅನುಭವವಿಲ್ಲದ ಕೇಂದ್ರ ಬಿಜೆಪಿ.ಸರ್ಕಾರವನ್ನು ರಾಷ್ಟ್ರಪತಿಯವರು ವಜಾಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಉಪಾಧ್ಯಕ್ಷೆ ನಜ್ಮತಾಜ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ಪೂಜಾರಿ, ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್ನಾಯ್ಡು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಸಾಧಿಕ್ವುಲ್ಲಾ, ಎಂ.ಡಿ.ಹಸನ್ತಾಹೀರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಕಲ್ಪನ, ಶೃತಿ, ಕುಮಾರಿ, ಎಲ್.ಜಿ.ರತ್ನಮ್ಮ, ವನಿತ, ಸತ್ಯಮ್ಮ, ಹೆಚ್.ಟಿ.ಶಶಿಕಲಾ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.