ಪುರಷನಿಗೆ ಸರಿಸಮನಾಗಿ ದುಡಿಯುತ್ತಿರುವ ಹೆಣ್ಣಿಗೆ ಅನುಕಂಪ ಬೇಕಿಲ್ಲ : ಬಿ.ಕೆ.ರಹಮತ್‍ವುಲ್ಲಾ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ, ಹಕ್ಕು, ಬಾಧ್ಯತೆ ನೀಡಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ತಿಳಿಸಿದರು.

ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವರ್ಷವೂ ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಹಿಳೆಯ ಮೇಲಾಗುವ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ನಿಂತಿಲ್ಲ. ಕಾನೂನಿನಲ್ಲಿ ಮಹಿಳೆಗೆ ಸಾಕಷ್ಟು ರಕ್ಷಣೆಯಿದೆ. ಹೆಣ್ಣು ಅಬಲೆಯಲ್ಲ. ಸಬಲೆ ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಪುರಷನಿಗೆ ಸರಿಸಮನಾಗಿ ದುಡಿಯುತ್ತಿರುವ ಹೆಣ್ಣಿಗೆ ಅನುಕಂಪ ಬೇಕಿಲ್ಲ. ಸ್ವಾವಲಂಭಿಯಾಗಿ ದುಡಿದು ಜೀವಿಸಲು ಅವಕಾಶ ಸಿಕ್ಕಾಗ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ ಲೈಂಗಿಕ ದೌರ್ಜನ್ಯ ಹೆಚ್ಚಳವಾಗುತ್ತಿರುವುದರಿಂದ ಹೆಣ್ಣು ಮಕ್ಕಳು ಜಾಸ್ತಿ ಶಿಕ್ಷಣ ಪಡೆಯಲು ಆಗುತ್ತಿಲ್ಲ. ಅಪ್ರಾಪ್ತ ವಯಸ್ಸಿಗೆ ವಿವಾಹ ಮಾಡುವುದು ಅಕ್ಷಮ್ಯ ಅಪರಾಧ. ಇದರಿಂದ ಪೋಷಕರುಗಳಿಗೂ ಶಿಕ್ಷೆಯಾಗುತ್ತದೆ. ಹೆಣ್ಣು-ಗಂಡೆಂಬ ವ್ಯತ್ಯಾಸ ಬೇಡ. ಹೆಣ್ಣಿಗೆ ಗಂಡಿನಷ್ಟೆ ಸಮಾನವಾದ ಶಿಕ್ಷಣ ಬೇಕು. ತಾಯಂದಿರು ಮಕ್ಕಳ ಮೇಲೆ ನಿಗಾ ಇಡಬೇಕು. ಶಿಕ್ಷಣದ ಜೊತೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರುಳ ಮೇಲಿದೆ ಎಂದರು.

ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ಆಗುತ್ತಿದೆ. ಕಾನೂನು ಬಗ್ಗೆ ಅರಿವು ಮೂಡಿಸಿಕೊಳ್ಳಿ. ಸರ್ಕಾರದಿಂದ ಸಿಗುವ ಸೌಲಭ್ಯ ಹಾಗೂ ಹಕ್ಕುಗಳನ್ನು ಬಳಸಿಕೊಂಡು ತನ್ನ ಕಾಲ ಮೇಲೆ ತಾನು ನಿಂತು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕು. ಇಲಾಖೆಯಿಂದ ಸ್ತ್ರೀಶಕ್ತಿ ಸಂಘಗಳನ್ನು ರಚಿಸಲಾಗಿದೆ. ಹದಿನೈದರಿಂದ ಇಪ್ಪತ್ತು ಮಹಿಳೆಯರು ಸೇರಿ ಒಂದು ಸಂಘವನ್ನು ಕಟ್ಟಿಕೊಳ್ಳಬಹುದು. ಇದರಿಂದ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಹಾಯವಾಗಲಿದೆ. ಸಾಂತ್ವನ, ಸಖಿ ಯೋಜನೆಗಳಿವೆ. ಇದರಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳು ದೊರಕುತ್ತವೆ. ದೇವದಾಸಿ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರು, ಹೆಚ್.ಐ.ವಿ.ಸೋಂಕಿತ ಮಹಿಳೆಯರಿಗೆ ಆಶ್ರಯವಿದೆ. ಮಹಿಳೆಯರ ರಕ್ಷಣೆಗಾಗಿಯೇ ಮಹಿಳಾ ಆಯೋಗವಿದೆ ಎಂದು ಹೇಳಿದರು.

ಮಂಜುನಾಥ್ ಭಾಗವತ್ ಮಾತನಾಡಿ ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತವೆಂಬ ನಂಬಿಕೆಯಿದೆ. ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಲಿವೆ. ಮಹಿಳೆಯರು ಪುರುಷರಿಗಿಂತ ಕಮ್ಮಿಯಿಲ್ಲ. ಎಲ್ಲಾ ರಂಗಗಳಲ್ಲಿಯೂ ತನ್ನ ಶಕ್ತಿ ಸಾಮಥ್ರ್ಯವನ್ನು ಪ್ರದರ್ಶಿಸುತ್ತಿದ್ದಾಳೆ. ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಪುರುಷರಿಗಿಂತ ಮಹಿಳೆ ಮೇಲಿದ್ದಾಳೆಂದು ನುಡಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ರವಿ ಅಂಬೇಕರ್, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್, ಶಿವರಾಂ ಇವರುಗಳು ವೇದಿಕೆಯಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *