ಸುದ್ದಿಒನ್,ಗದಗ,ಜೂನ್.2: ಸರ್ಕಾರ ಕೊಡುವ ಪ್ರತಿ ತಿಂಗಳ ಹಣ ಕೇವಲ ಮನೆ ಖರ್ಚಿಗೆ ಮಾತ್ರವಲ್ಲ, ಮನಸ್ಸಿದ್ದರೆ ಅದರಿಂದ ಸಮಾಜವನ್ನೇ ಬದಲಾಯಿಸಬಹುದು ಎಂಬುದನ್ನು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಹಿಳೆಯರು ಸಾಬೀತುಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೆ, ಸರ್ಕಾರಿ ಶಾಲಾ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಬಳಸಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಶಾಲಾ ಶೈಕ್ಷಣಿಕ ವರ್ಷದ ಮೊದಲ ದಿನವೇ ಕೊತಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಶಾಲೆಯ ಎಸ್‌ಡಿಎಂಸಿ (SDMC) ಮಹಿಳಾ ಸದಸ್ಯರಾದ ರೇಖಾ ಕೋಡಿಕೊಪ್ಪದ, ಹುಲಿಗೆವ್ವ ಪಾಟೀಲ, ಸುವರ್ಣಾ ಅಸೂಟಿ, ಮಂಜುಳಾ ಮಾದರ ಸೇರಿದಂತೆ ರೇಣುಕಾ, ನಾಗರತ್ನಾ, ಯಶೋದಾ ಮತ್ತು ಗಿರಿಜಾ ಅವರುಗಳು ಈ ಮಹತ್ಕಾರ್ಯಕ್ಕೆ ಕೈಜೋಡಿಸಿದ ಸಾಧಕಿಯರು.
ತಮಗೆ ಪ್ರತಿ ತಿಂಗಳು ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಧನಸಹಾಯವನ್ನು ಈ ಮಹಿಳೆಯರು ವ್ಯರ್ಥ ಮಾಡದೇ ಒಂದೆಡೆ ಒಟ್ಟುಗೂಡಿಸಿದ್ದರು. ಶಾಲೆಗಳು ಪುನರಾರಂಭಗೊಳ್ಳುವ ದಿನದಂದೇ ಬಡ ಕುಟುಂಬಗಳ ಮಕ್ಕಳಿಗೆ ಹೊರೆಯಾಗಬಾರದು ಎಂಬ ಉದಾತ್ತ ಉದ್ದೇಶದಿಂದ, ಆ ಎಲ್ಲ ಹಣದಿಂದ ಸುಂದರವಾದ ಸ್ಕೂಲ್ ಬ್ಯಾಗ್‌ಗಳನ್ನು ಖರೀದಿಸಿ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.

ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗುತ್ತಿದೆ ಎಂಬ ಮಾತಿದೆ. ಆದರೆ ಕೊತಬಾಳ ಗ್ರಾಮದ ಈ ಮಹಿಳೆಯರು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು, ಸಾಮಾಜಿಕ ಕಳಕಳಿಗೂ ಈ ಹಣವನ್ನು ಹೇಗೆ ಬಳಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಮಹಿಳೆಯರ ಈ ಅಪೂರ್ವ ಸೇವೆ ಮತ್ತು ಸಮಯಪ್ರಜ್ಞೆಗೆ ಈಗ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೊಸ ಬ್ಯಾಗ್ ತೊಟ್ಟು ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳ ಮುಖದ ಮೇಲಿನ ಸಣ್ಣ ನಗು, ಈ ಮಹಿಳೆಯರ ಸಾರ್ಥಕತೆಗೆ ಸಾಕ್ಷಿಯಂತಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















