ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.21) : ನಗರದ ಸರ್ಕಾರಿ ಬಸ್‍ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ ಏರಿ ಸೀಟು ಹಿಡಿಯಲು ನೂರಾರು ಮಹಿಳೆಯರು ಮುಗಿಬಿದ್ದಿದ್ದನ್ನು ನೋಡಿ ದಂಗಾದ ಪುರುಷರು ಇದರ ಸಹವಾಸವೆ ಬೇಡ ಎಂದು ಮನದಲ್ಲಿ ಶಪಿಸುತ್ತ ದೂರು ನಿಂತು ಅಸಹಾಯಕರಾಗಿ ನೋಡುತ್ತಿದ್ದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಚುನಾವಣಾ ಪೂರ್ವದಲ್ಲಿಯೇ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿ ರಾಜ್ಯಾದ್ಯಂತ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದು, ಪಾವಗಡದಿಂದ ಚಿತ್ರದುರ್ಗದ ಮೂಲಕ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‍ನಲ್ಲಿ ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ಮಹಿಳೆಯರು ನೂಕು ನುಗ್ಗಲಿನಲ್ಲಿ ತೊಡಗಿದ್ದಾಗ ಬಸ್‍ನೊಳಗಿದ್ದ ಕಂಡಕ್ಟರ್ ಕೆಳಗಿಳಿಯಲು ಹರಸಾಹಸ ಪಡಬೇಕಾಯಿತು.
ರಾಜ್ಯ ಸರ್ಕಾರ ಮಹಿಳೆಯರಿಗಾಗಿಯೇ ಪ್ರತ್ಯೇಕ ಸರ್ಕಾರಿ ಬಸ್‍ಗಳ ಸಂಚಾರ ಆರಂಭಿಸುವುದು ಸೂಕ್ತ ಎಂದು ಪುರುಷ ಪ್ರಯಾಣಿಕರು ಗೊಣಗುಟ್ಟುತ್ತಿದ್ದರು.
ಇಷ್ಟೇ ಅಲ್ಲದೇ ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಬೆಂಗಳೂರು ಮತ್ತು ದಾವಣಗೆರೆ ಕಡೆಗೆ ಪ್ರಯಾಣಿಸುವ ಪ್ರಯಾಣಿಕರ ಸಹಾ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾರದ ರಜೆ ಮುಗಿಸಿ ಮರಳಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳುವ ಪ್ರಯಾಣಿಕರು ಮತ್ತು ಪುಣ್ಯಕ್ಷೇತ್ರಗಳಿಗೆ ತೆರಳುವ ಮಹಿಳಾ ಪ್ರಯಾಣಿಕರು ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಬಸ್ಸುಗಳಿಗಾಗಿ ಕಾಯುವಂತ ಪರಿಸ್ಥಿತಿಯಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿದ ನಂತರ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ.