ಮಹಿಳೆಯರು ಕೀಳರಿಮೆಯನ್ನು ಬಿಟ್ಟು ಸ್ವಾವಲಂಬಿಯಾಗಿ : ಜಿ.ಎಸ್.ವೆಂಕಟೇಶ್

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 20 : ಹೆಣ್ಣು ಮಕ್ಕಳು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಶಕ್ತಿ ಸಾಮರ್ಥ್ಯವನ್ನು ಅರಿತಾಗ ಸ್ವಾವಲಂಭಿಯಾಗಿ ಬದುಕಬಹುದು ಎಂದು ಬಜ್ ಇಂಡಿಯಾ ಟ್ರಸ್ಟ್, ಬಬ್-ವಿಮೆನ್ ಕಾರ್ಯಕ್ರಮ ವ್ಯವಸ್ಥಾಪಕ ಬೆಂಗಳೂರಿನ ಜಿ.ಎಸ್.ವೆಂಕಟೇಶ್ ಕರೆ ನೀಡಿದರು.

 

ಬಜ್ ಇಂಡಿಯಾ ಟ್ರಸ್ಟ್, ಬಜ್-ವಿಮೆನ್ ಚಿತ್ರದುರ್ಗ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗೆಳತಿ ಸಮಾಗಮ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

 

ಹಳ್ಳಿ ಹಳ್ಳಿಗೆ ಹೋಗಿ ಹೆಣ್ಣು ಮಕ್ಕಳನ್ನು ಒಂದು ಕಡೆ ಸೇರಿಸಿ ತರಬೇತಿ ಕೊಡುವುದು ಕಷ್ಟದ ಕೆಲಸ. ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ 6 ವರೆ ಲಕ್ಷ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. 2012 ರಿಂದ ಇಲ್ಲಿಯವರೆಗೂ ನಮ್ಮ ಸಂಸ್ಥೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು, ಸಿ.ಡಿ.ಪಿ.ಓ.ಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಹಕಾರ ನೀಡುತ್ತ ಬರುತ್ತಿದ್ದಾರೆ. ಅಡುಗೆ ಮನೆಗಷ್ಟೆ ಮಹಿಳೆಯರು ಸೀಮಿತ ಎನ್ನುವ ತಪ್ಪು ಕಲ್ಪನೆ ಬೇಡ. ನಮ್ಮ ಸಂಸ್ಥೆಯಿಂದ ಸ್ಪೂರ್ತಿ ತರಬೇತಿ ನೀಡಿರುವುದರಿಂದ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುವುದರ ಜೊತೆ ಹಣ ಉಳಿತಾಯ ಮಾಡುವ ಜಾಗೃತಿ ಮೂಡಿದೆ ಎಂದು ಹೇಳಿದರು.

 

ನಮ್ಮದು ಹಣ ಕೊಡುವ ಸಂಸ್ಥೆಯಲ್ಲ. ಸ್ವಾವಲಂಭಿಗಳಾಗಿ ಬದುಕುವ ಜ್ಞಾನ ನೀಡುತ್ತೇವೆ. ಹದಿನೆಂಟು ಸಾವಿರ ಹಳ್ಳಿಗಳಿಂದ ಹದಿನೈದು ಸಾವಿರ ಹೆಣ್ಣು ಮಕ್ಕಳು ಸ್ವಯಂ ಸೇವಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಜೇನುಗೂಡು ಸಭೆಗಳನ್ನು ನಡೆಸುವಷ್ಟರ ಮಟ್ಟಿಗೆ ಮಹಿಳೆಯರು ಬುದ್ದಿವಂತರಾಗಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ಪ್ರತಿಯೊಬ್ಬರು ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಹೃದಯಾಘಾತಕ್ಕೆ ಬಲಿಯಾಗುವುದು ಸರ್ವೆ ಸಾಮಾನ್ಯವಾಗಿದೆ. ಎರಡು ವರ್ಷಗಳಿಂದ ಸಂಸ್ಥೆಗೆ ಶಕ್ತಿ ಫಂಡ್ ನೀಡಲು ಸಿದ್ದರಾಗಿದ್ದೀರಿ. ಈ ಹಣ ಬಳಸಿಕೊಂಡು ಹೊಸ ಜಿಲ್ಲೆಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇವೆ. ಕೆಲವು ಹೊರ ದೇಶಗಳಲ್ಲಿಯೂ ಬಜ್ ಇಂಡಿಯಾ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ ಎಂದರು.

 

ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡುತ್ತ ಬಜ್ ಇಂಡಿಯಾ ಸಂಸ್ಥೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಷ್ಟೊಂದು ಮಹಿಳಾ ಪಡೆಯನ್ನು ಕಟ್ಟಿರುವುದು ಸುಲಭದ ಕೆಲಸವಲ್ಲ. ಮಾ.22 ವಿಶ್ವ ಜಲ ದಿನಾಚರಣೆ ಆಚರಿಸುತ್ತಿರುವುದರಿಂದ ಮಹಿಳೆಯರು ನೀರಿನ ಮಹತ್ವ ಅರಿಯಬೇಕು. ನೀರು ಮತ್ತು ನಾರಿಯರಿಗೆ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.

 

ಮಳೆ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಹೇಗೆ ಸಂಗ್ರಹಿಸಿ ಮಿತವಾಗಿ ಬಳಸಬೇಕು ಎನ್ನುವುದರ ಕುರಿತು ಮಹಿಳೆಯರಲ್ಲಿ ಅರಿವಿರಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲಾ ನೀರು ಕಲುಷಿತಗೊಂಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಪರಿಶುದ್ದವಾದ ನೀರು ಯಾವುದಾದರೂ ಇದ್ದರೆ ಅದು ಮಳೆ ನೀರು ಮಾತ್ರ. ಮಳೆ ನೀರು ಕೊಯ್ಲಿಗೆ ಹೆಚ್ಚಿನ ಒತ್ತು ಕೊಟ್ಟು ಅಡುಗೆಗೆ ಬಳಸಿದರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಮನೆಯ ಛಾವಣಿ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡರೆ ಒಳ್ಳೆಯದು ಎಂದು ತಿಳಿಸಿದರು.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಎ.ಸಿ.ಡಿ.ಪಿ.ಓ. ಮಂಜುಳ ಮಾತನಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮುಖ್ಯ. ಸ್ತ್ರೀಶಕ್ತಿ ಗುಂಪುಗಳನ್ನು ರಚಿಸುವುದು ಸುಲಭವಲ್ಲ. ಸ್ವ-ಉದ್ಯೋಗದ ಮೂಲಕ ದುಡಿಮೆಯ ದಾರಿ ಕಂಡುಕೊಂಡು ಸ್ವಾವಲಂಭಿಗಳಾಗಿ ಬದುಕಲು ಬಜ್ ಇಂಡಿಯಾ ಸಂಸ್ಥೆ ಶ್ರಮಿಸುತ್ತಿದೆ. ಇದರ ಜೊತೆ ನಮ್ಮ ಇಲಾಖೆ ಕೂಡ ಕೈಜೋಡಿಸುತ್ತಿದೆ ಎಂದು ಹೇಳಿದರು.

ಎನ್.ಆರ್.ಎಂ.ಎಲ್.ನ ಯೋಗೇಶ್, ಸಾಹಿತಿ ಶರಿಫಾಬಿ, ಬಸವೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ವೇದಿಕೆಯಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *