ಚಿತ್ರದುರ್ಗ : ಮಹಿಳೆಯರಲ್ಲಿ ವಿಶಾಲವಾದ ಗುಣವಿದ್ದರೆ ಯಾವುದೇ ಕುಟುಂಬದಲ್ಲಾಗಲಿ ಸಮಸ್ಯೆಗಳೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಮಹಿಳಾ ಸೇವಾ ಸಮಾಜದ 92 ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿನ ಮಹಿಳಾ ಸೇವಾ ಸಮಾಜದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ತೃಪ್ತಿ, ಸಮಾಧಾನ ಎನ್ನುವುದಕ್ಕೆ ಮಿತಿಯಿಲ್ಲ. ಮಹಿಳೆಯರು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗಟ್ಟಾಗಿ ಮಹಿಳಾ ಸೇವಾ ಸಮಾಜವನ್ನು ಮುನ್ನಡೆಸಿಕೊಂಡು ಹೋಗಿ. ಮನೆಯ ಒಳಗೆ ಮತ್ತು ಹೊರಗೆ ಎಲ್ಲವನ್ನು ಸಮಾನವಾಗಿ ನಿಭಾಯಿಸಿಕೊಂಡು ಹೋದಾಗ ಮಾತ್ರ ಮಹಿಳೆ ಕ್ರಿಯಾಶೀಲವಾಗಿರಲು ಸಾಧ್ಯ. ಮಹಿಳಾ ಆಯೋಗದಲ್ಲಿ ನಾನು ಕೆಲಸ ಮಾಡುವಾಗ ಅನೇಕ ಮಹಿಳೆಯರು ಪುರುಷರ ವಿರುದ್ದ ತಮ್ಮ ದೂರುಗಳನ್ನು ಹೊತ್ತು ತರುತ್ತಿದ್ದರು. ಹೆಣ್ಣು-ಗಂಡು ಎನ್ನುವ ತಾರತಮ್ಯ ಬೇಡ. ಪ್ರತಿ ಮನೆಯಲ್ಲಿಯೂ ಅತ್ತೆ, ಸೊಸೆ ಹೊಂದಿಕೊಂಡು ಹೋಗಬೇಕು. ಅತ್ತೆ ಎನ್ನಿಸಿಕೊಂಡವರು ಸೊಸೆಯನ್ನು ಮಗಳಂತೆ ಕಾಣಬೇಕು. ಆಗ ಕುಟುಂಬದಲ್ಲಿ ಕಿರಿಕಿರಿ ಎನ್ನುವುದೇ ಇರುವುದಿಲ್ಲ. ಕ್ಷಮಾಗುಣ ಬೆಳೆಸಿಕೊಂಡು ಇರುವಷ್ಟು ದಿನ ನೆಮ್ಮದಿಯಾಗಿರುವುದೇ ಜೀವನ ಎಂದು ತಿಳಿಸಿದರು.
ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ 94 ವರ್ಷಗಳ ಇತಿಹಾಸವಿರುವ ಮಹಿಳಾ ಸೇವಾ ಸಮಾಜವನ್ನು ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಯಾವುದೇ ಕಡತಗಳು ಇಲ್ಲದಿದ್ದರೂ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿಯನ್ನು ಪಡೆದು ಕ್ರಮಬದ್ದವಾಗಿ ಕಡತಗಳನ್ನು ಇಟ್ಟಿದ್ದೇವೆ.
ಇಲ್ಲಿಯವರೆಗೂ ಮಹಿಳಾ ಸೇವಾ ಸಮಾಜದ ಪರವಾಗಿ ಕೆಲಸ ಮಾಡಿದ್ದಕ್ಕೆ ವಿರೋಧಿ ಗುಂಪಿನವರು ನಮ್ಮ ಮೇಲೆ ಜಾತಿನಿಂದನೆ ಕೇಸು ದಾಖಲಿಸಿದಾಗ ಕೋರ್ಟ್ ಕಚೇರಿಗೆ ಅಲೆದಾಡಬೇಕಾಯಿತು. ಆದರೂ ಎಲ್ಲವನ್ನು ಧೈರ್ಯದಿಂದ ನಿಭಾಯಿಸಿಕೊಂಡು ಮುನ್ನಡೆಯುತ್ತಿದ್ದೇವೆಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡರು.
ಕೌಟುಂಬಿಕ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರು ನ್ಯಾಯಕ್ಕಾಗಿ ನಮ್ಮ ಬಳಿ ಬರುತ್ತಿರುತ್ತಾರೆ. ಆಗ ಅವರ ಸಮಸ್ಯೆಗಳನ್ನು ಆಲಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೌನ್ಸಿಲಿಂಗ್ ಮೂಲಕ ಬಗೆಹರಿಸುತ್ತೇವೆ. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಎರಡು ಸಾರಿ ಬಡ ಕುಟುಂಬಗಳಿಗೆ ರೇಷನ್ ಕಿಟ್‍ಗಳನ್ನು ನೀಡಿದ್ದೇವೆ. ಅನೇಕ ಬಡ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನೆರವು ಕೇಳಿಕೊಂಡು ಬರುತ್ತಾರೆ. ನಮ್ಮಲ್ಲಿರುವ ಅನಾಥಾಶ್ರಮ ಶಿಥಿಲಗೊಂಡಿದ್ದು, ದುರಸ್ತಿ ಮಾಡಿಸಲುನಮ್ಮಲ್ಲಿ ಹಣದ ಕೊರತೆಯಿದೆ. ಹಾಗಾಗಿ ದಾನಿಗಳ ನೆರವು ಪಡೆಯಬೇಕಿದೆ ಎಂದು ಹೇಳಿದರು.
ಮಹಿಳಾ ಸೇವಾ ಸಮಾಜದ ಕಾನೂನು ಸಲಹೆಗಾರ ಕೆ.ಎನ್.ವಿಶ್ವನಾಥಯ್ಯ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಬಿ.ವಿಶ್ವನಾಥ್ ಇವರುಗಳು ಮಾತನಾಡಿದರು.
ಭಾರತಿ ಸುರೇಶ್ ಪ್ರಾರ್ಥಿಸಿದರು. ಅನ್ನಪೂರ್ಣ ಸಜ್ಜನ್ ಸ್ವಾಗತಿಸಿದರು. ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಲತಾ ಉಮೇಶ್ ವರದಿ ಮಂಡಿಸಿದರು.
ಮಾಲಾ ನಾಗರಾಜ್ ನಿರೂಪಿಸಿದರು.
ಮಹಿಳಾ ಸೇವಾ ಸಮಾಜದ ಎಲ್ಲಾ ಸದಸ್ಯರು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.