ಬೆಂಗಳೂರು: ಒಂದು ಕಡೆ ಕೊರೊನಾ ಮೂರನೆ ಅಲೆ ಜೋರಾಗಿದೆ. ಮತ್ತೊಂದು ಕಡೆ ರೂಪಾಂತರಿ ವೈರಸ್ ತನ್ನ ಹಾವಳಿ ಶುರು ಮಾಡಿದೆ. ಇದಕ್ಕೆಲ್ಲಾ ಮದ್ದು ಎಂಬಂತೆ ಕೊರೊನಾ ಲಸಿಕೆ ಕೆಲಸ ಮಾಡುತ್ತೆ ಎನ್ನಲಾಗಿದ್ದು, ಎಲ್ಲರು ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರ, ಆರೋಗ್ಯ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ.
ಜೊತೆಗೆ ಹಳ್ಳಿ ಹಳ್ಳಿಗೂ ಹೋಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ನಡುವೆ ಕೋರ್ಟ್ ಬಲವಂತವಾಗಿ ಲಸಿಕೆ ಕೊಡದಿರಲು ತಿಳಿಸಿದೆ. ಕೇಂದ್ರ ಸರ್ಕಾರ ಕೂಡ ಬಲವಂತ ಮಾಡಲ್ಲ ಎಂದು ಹೇಳಿದೆ. ಹೀಗಾಗಿ ಸರ್ಕಾರ ಕೂಡ ಜನರಿಗೆ ಜಾಗೃತಿಯನ್ನಷ್ಟೇ ಮೂಡಿಸುತ್ತಿದೆ.
ಈ ಮಧ್ಯೆ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಈಗಲೂ ಒಲ್ಲೆ ಅಂತಿದ್ದಾರೆ. ನೆಲಮಂಗಲ ತಾಲ್ಲೂಕಿನ ಗೋವಿಂದಪುರದಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದ ಆರೋಗ್ಯ ಸಿಬ್ಬಂದಿ ಜೊತೆಗೆ ಮಹಿಳೆ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ. ಲಸಿಕೆ ಹಾಕಿಸಿಕೊಳ್ಳಿ ಎಂದ ಆರೋಗ್ಯ ಸಿಬ್ಬಂದಿಗೆ, ಒಂದು ತೊಟ್ಟು ವಿಷ ಕೊಟ್ಬಿಡಿ ಆದ್ರೆ ವ್ಯಾಕ್ಸಿನ್ ಮಾತ್ರ ಬೇಡ ಎಂದು ಮಹಿಳೆಯೊಬ್ಬರು ಭಯಗೊಂಡಿದ್ದಾರೆ.