ಮಹಿಳೆಯರಿಗೆ ಮೀಸಲಾತಿ ಅಗತ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

suddionenews
2 Min Read

ಚಿತ್ರದುರ್ಗ : ವಿಧಾನಸಭೆ ಮತ್ತು ಪಾರ್ಲಿಮೆಂಟ್‍ನಲ್ಲಿ ಮಹಿಳಾ ಮೀಸಲಾತಿ ಕುರಿತು ಚರ್ಚೆಯಾಗುತ್ತಿದ್ದು, ಕಾನೂನು ಜಾರಿಗೊಳಿಸುವ ಈ ಎರಡು ಕಡೆ ಮಹಿಳೆಯರಿಗೆ ಮೀಸಲಾತಿ ಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಬ್ರೆಡ್ಸ್ ಬೆಂಗಳೂರು ಹಾಗೂ ಚಿತ್ರಡಾನ್‍ಬೋಸ್ಕೋ ಸಂಸ್ಥೆ ಚಿತ್ರದುರ್ಗ ವತಿಯಿಂದ ಶನಿವಾರ ಡಾನ್‍ಬೋಸ್ಕೋ ಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದಲ್ಲಿಯೇ ಅತ್ಯಂತ ಬಲಶಾಲಿ ರಾಷ್ಟ್ರ ಅಮೇರಿಕಾದಲ್ಲಿ ಇದುವರೆವಿಗೂ ಒಬ್ಬ ಮಹಿಳೆ ಅಧ್ಯಕ್ಷೆಯಾಗಿಲ್ಲ. ಅದರೆ ಬ್ರಿಟನ್, ಪಾಕಿಸ್ಥಾನ, ಭಾರತದಲ್ಲಿ ಮಹಿಳೆಯರು ಪ್ರಧಾನಿಯಾಗಿದ್ದಾರೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸಮಾನತೆ ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಹಣ ಉಳಿತಾಯ ಮಾಡಿ ಬ್ಯಾಂಕ್‍ಗಳಲ್ಲಿ ಇಟ್ಟಿರುವುದರಿಂದ ಮಹಿಳೆಯರಿಗೆ ಸಾಲ ಸಿಗುತ್ತದೆ. ಪ್ರಾಮಾಣಿಕವಾಗಿ ಸಾಲ ಹಿಂದಿರುಗಿಸುವವರು ಮಹಿಳೆಯರೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳೆಯರ ಅಭಿವೃದ್ದಿಗೆ ವಿಶೇಷ ಗಮನ ಕೊಡುತ್ತಿದೆ. ಕೇಂದ್ರದಿಂದಲೂ ಸಾಕಷ್ಟು ಅನುದಾನಗಳು ಬರುತ್ತವೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿರುವಂತೆ ವಿಧಾನಸಭೆ ಮತ್ತು ಪಾರ್ಲಿಮೆಂಟ್‍ನಲ್ಲಿಯೂ ಮೀಸಲಾತಿ ಬೇಕು. ಇದರಿಂದ ಎಲ್ಲಾ ಜನಾಂಗಕ್ಕೂ ಸಮಾನತೆ ನೀಡಿದಂತಾಗುತ್ತದೆ. ಮಕ್ಕಳು ತಮ್ಮ ತಂದೆ-ತಾಯಿಗಳನ್ನು ವಯಸ್ಸಾದ ಮೇಲೆ ಅನಾಥಾಶ್ರಮಕ್ಕೆ ಸೇರಿಸುವ ಪದ್ದತಿ ಸರಿಯಲ್ಲ. ಮನೆಯಲ್ಲಿಯೇ ಜೋಪಾನ ಮಾಡಬೇಕು ಎಂದರು.

ಪೆನಾಲ್ ಅಡ್ವೊಕೇಟ್ ದಿಲ್‍ಷಾದ್ ಉನ್ನಿಸಾ ಮಾತನಾಡಿ 2019 ರಲ್ಲಿ ಚಿತ್ರದುರ್ಗದಿಂದ ಚಳುವಳಿ ಆರಂಭಿಸಿದ ಹೆಣ್ಣು ಮಕ್ಕಳು ಮದ್ಯಪಾನ ನಿಷೇಧಿಸುವಂತೆ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ಒಂದು ವಿಶೇಷ. ಮಹಿಳೆಯರು ಪ್ರತಿಭಟನೆ, ಚಳುವಳಿ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

ಅಮೇರಿಕಾದ ನ್ಯೂಯಾರ್ಕ್‍ನ ಬಟ್ಟೆ ಗಿರಣಿಯಲ್ಲಿ ಯಾವುದೇ ನಿಗಧಿತ ಸಮಯವಿಲ್ಲದೆ. ಕಡಿಮೆ ವೇತನಕ್ಕಾಗಿ ದುಡಿಯುತ್ತಿದ್ದ ಮಹಿಳೆಯರು ತಮ್ಮ ಹಕ್ಕಿಗಾಗಿ 1908 ರಲ್ಲಿ ಹೋರಾಟ ನಡೆಸಿದ್ದರ ಫಲವಾಗಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳೆಯ ಆವಿಷ್ಕಾರ, ಸಾಧನೆ, ಶಿಕ್ಷಣಕ್ಕಾಗಿ ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲ. ಸುಸ್ಥಿರ ಸಮಾಜಕ್ಕಾಗಿ ಸಮಾನತೆ ಬೇಕು. ಇದರಿಂದ ಅಭಿವೃದ್ದಿ ಸಾಧ್ಯ. ಲಿಂಗ ಅಸಮಾನತೆ ಇರುವ ಕಡೆ ಮಹಿಳೆಯರು ಧ್ವನಿಯಾಗಬೇಕು. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಗೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಅವಕಾಶ ಸಿಕ್ಕರೂ ಕೆಲವು ಮಹಿಳೆಯರು ಮನೆಯಿಂದ ಹೊರಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಾನ್‍ಬೋಸ್ಕೋ ನಿರ್ದೇಶಕ ಫಾದರ್ ಸಜ್ಜಿಜಾರ್ಜ್ ಅಧ್ಯಕ್ಷತೆ ವಹಿಸಿದ್ದರು.
ಫಾದರ್ ಜೋಸೆಫ್ ದಂಡಾವತಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಹಾಲಕ್ಷ್ಮಿ, ಸುಧ ವೇದಿಕೆಯಲ್ಲಿದ್ದರು.

ಶೃತಿ ಪ್ರಾರ್ಥಿಸಿದರು. ಥೆರೇಸಾ ಸ್ವಾಗತಿಸಿದರು. ಸಣ್ಣನಿಂಗಪ್ಪ ವಂದಿಸಿದರು. ಕಾರ್ಯಕ್ರಮ ಸಂಯೋಜಕಿ ಭಾರತಿ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *