ಸಂವಿಧಾನದಲ್ಲಿ ಮಹಿಳೆಯರಿಗೆ ಅನೇಕ ಹಕ್ಕುಗಳಿವೆ ಈ ಕುರಿತು ಜಾಗೃತಿ ಮೂಡಿಸಬೇಕು : ಬಿ.ಕೆ.ರಹಮತ್‍ವುಲ್ಲಾ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.17  : ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಕಾನೂನು ಜಾರಿಗೆ ತರಲಾಗಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಗಾನಯೋಗಿ ಸಂಗೀತ ಬಳಗದ ವತಿಯಿಂದ ಪತ್ರಕರ್ತರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಗೀತ ಗಾಯನ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಹದಿನೆಂಟು ಹತ್ತೊಂಬತ್ತನೆ ಶತಮಾನದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿರಲಿಲ್ಲ. ಸತಿಸಹಗಮನ ಪದ್ದತಿಯಿತ್ತು. ರಾಜಾರಾಮ್ ಮೋಹನ್‍ರಾಯ್ ಈ ಪದ್ದತಿಯನ್ನು ವಿರೋಧಿಸಿದರು. 2005 ರಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕು ಜಾರಿಯಾಯಿತು. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕೊಡಲಾಗಿದೆ. ಸಂವಿಧಾನದಡಿ ಅನೇಕ ಹಕ್ಕುಗಳಿವೆ ಎನ್ನುವುದರ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಶಫೀವುಲ್ಲಾ ಎಚ್.ಎಸ್. ಮಾತನಾಡಿ ಪ್ರತಿ ವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿಶೇಷ ವ್ಯಕ್ತಿಯನ್ನು ಪರಿಚಯಿಸಿಕೊಂಡು ಬರುತ್ತಿದ್ದೇವೆ. ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಉದ್ದೇಶ. ಅದರಂತೆ ಈ ಸಾರಿ ನಿವೃತ್ತ ಮುಖ್ಯ ಶಿಕ್ಷಕಿ ಮಂಜುಳ ಎಸ್.ರವರನ್ನು ವಿಶೇಷ ವ್ಯಕ್ತಿಯನ್ನಾಗಿ ಆಹ್ವಾನಿಸಿ ಸನ್ಮಾನಿಸುತ್ತಿದ್ದೇವೆಂದು ಹೇಳಿದರು.

ಸಮಾಜದಲ್ಲಿ ಸ್ವಾರ್ಥ ಜಾಸ್ತಿಯಾಗಿದೆ. ನಮ್ಮ ವೇದಿಕೆ ಕನ್ನಡ ನಾಡು ನುಡಿ ನೆಲ ಜಲದ ಉಳಿವಿಗಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಶ್ರೀಮತಿ ದಯಾಪುತ್ತೂರ್ಕರ್ ಮಾತನಾಡುತ್ತ ಒಂದು ವರ್ಷದಲ್ಲಿ ಎಂಟು ಕಾರ್ಯಕ್ರಮಗಳನ್ನು ನಡೆಸಿರುವ ಡಾ.ಶಫಿವುಲ್ಲಾ ಎಚ್.ಎಸ್.ರವರಿಗೆ ಎಲ್ಲರೂ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ವೇದಿಕೆಯ ಗೌರವ ಸಲಹೆಗಾರರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನ ಜಾರಿಯಾಗಿ ಎಪ್ಪತ್ತೈದು ವರ್ಷಗಳಾಗಿದ್ದರೂ ಸಾಮಾಜಿಕ ಸ್ಥಾನಮಾನ ಸಿಕ್ಕಿದೆಯೆ ಹೊರತು ಕೌಟುಂಬಿಕವಾಗಿ ಭಾವನೆಗಳು ಇನ್ನು ಬದಲಾಗಿಲ್ಲದ ಕಾರಣ ಮಹಿಳೆಯ ಮೇಲಿನ ಶೋಷಣೆ, ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ ನಿಂತಿಲ್ಲ. ರಾಜಕೀಯದಲ್ಲಿ ನೀಡಲಾಗಿರುವ ಶೇ.33 ರಷ್ಟು ಮೀಸಲಾತಿ ಪ್ರಭಾವಿ ಮಹಿಳೆಯರಿಗೆ ಸಿಗುತ್ತಿದೆಯೇ ವಿನಃ ಸಾಮಾನ್ಯ ಕುಟುಂಬದ ಮಹಿಳೆಗೆ ಇನ್ನು ತಲುಪುತ್ತಿಲ್ಲ. ಹೆಣ್ಣು ಕೇವಲ ಅಡುಗೆ ಮನೆಗಷ್ಟೆ ಸೀಮಿತವಾಗಿರದೆ ಸಾಹಿತ್ಯದ ಮೂಲಕ ತನ್ನ ಭಾವನೆಗಳನ್ನು ಹಂಚಿಕೊಳ್ಳಬೇಕೆಂದು ಸಲಹೆ ನೀಡಿದರು.

ಶಿಕ್ಷಕಿ ಡಾ.ಶಬ್ರಿನಾ ಮಹಮದ್ ಅಲಿ, ಗಾನಯೋಗಿ ಸಂಗೀತ ಬಳಗದ ಉಪ ಸಮಿತಿ ಅಧ್ಯಕ್ಷೆ ಸುಮಾ ರಾಜಶೇಖರ್, ಶಾಂತಮ್ಮ ಕೆ.ಟಿ. ಸೌಮ್ಯ ಪುತ್ರನ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *