ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ಹೆಣ್ಣು ಕೇವಲ ಅಡುಗೆ ಕೋಣೆಗೆ ಸೀಮಿತವಾಗದೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸಿ ಮಾದರಿಯಾಗುತ್ತಿದ್ದಾಳೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್ ಹೇಳಿದರು.

ನಗರದ ಚಿತ್ರ ಡಾನ್ ಬೋಸ್ಕೋ ಸಭಾಂಗಣದಲ್ಲಿ ಚಿತ್ರ ಡಾನ್ ಬೋಸ್ಕೋ ಸಮಾಜ ಸೇವಾ ಸಂಸ್ಥೆ, ಚಿತ್ರದುರ್ಗ ಇವರ ವತಿಯಿಂದ ಮಹಿಳಾ ಸಬಲೀಕರಣ : ಉತ್ಕೃಷ್ಟ ಸಮಾಜಕ್ಕಾಗಿ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ಕೃಷ್ಟ ಸಮಾಜದ ಬೆಳವಣಿಗೆಗೆ ಮಹಿಳೆಯ ಪಾತ್ರ ತುಂಬಾ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಾವಲಂಬನೆ ಬದುಕನ್ನು ಕಟ್ಟಿಕೊಂಡು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಕಾಣಬೇಕು ಎಂದು ತಿಳಿಸಿದರು.ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಸ್ತ್ರೀ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಸರ್ವತೋಮುಖ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಚಿತ್ರ ಡಾನ್ ಬೋಸ್ಕೋ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಂದನೀಯ ಸ್ವಾಮಿ ಉದಯ್ ರವರು ಮಾತನಾಡಿ ಮಹಿಳೆಯರೆಂಬ ಕೀಳರಿಮೆ ಬಿಟ್ಟು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಲ್ಲದೇ ಮಹಿಳೆಯರು ಹೆಚ್ಚಿನ ಶಿಕ್ಷಣವನ್ನು ಪಡೆದುಕೊಂಡು ಸಬಲರಾಗಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರ ಡಾನ್ ಬೋಸ್ಕೋ ಸೇವಾ ಸಂಸ್ಥೆಯ ನಿರ್ದೇಶಕರಾದ ಡಿ.ಸಿ ಆಂಥೋನಿ ರಾಜ್ ಹೆಣ್ಣು ಸಮಾಜದ ಕಣ್ಣು ,ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಆದ್ದರಿಂದ ಹೆಣ್ಣಾಗಿರುವುದ್ದಕ್ಕೆ ಹೆಮ್ಮೆ ಪಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ವಸಹಾಯ ಸಂಘದ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.ಡಾನ್ ಬೋಸ್ಕೋ ಪದವಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಮಣಿಪುರ ಸಾಂಸ್ಕೃತಿಕ ನೃತ್ಯ ಎಲ್ಲರ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಚಿತ್ರ ಡಾನ್ ಬೋಸ್ಕೋ ಆಡಳಿತಾಧಿಕಾರಿ ವಿ.ಎಂ.ಮ್ಯಾಥ್ಯೂ,ಡಾನ್ ಬೋಸ್ಕೋ ಸಂಸ್ಥೆಯ ಆಡಳಿತಾಧಿಕಾರಿ ಜಾನ್ ಪೌಲ್ ,ಡಾನ್ ಬೋಸ್ಕೋ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನ್ನಿ ಕ್ರಿಸ್ತದಾಸ್ ,ಡಾನ್ ಬೋಸ್ಕೋ ಐಸಿಎಸ್ಇ ಶಾಲೆಯ ಪ್ರಾಂಶುಪಾಲರಾದ ಕೆ.ಸಿ ಮ್ಯಾಥ್ಯೂ. ಫ್ಯಾಪ್ಕೋ ಸೊಸೈಟಿಯ ನಿರ್ದೇಶಕಿ ಚಂದ್ರಕಲಾ, ಪ್ರಾಣಿ ಸಂರಕ್ಷಕಿ ಕು.ಸ್ಫೂರ್ತಿ, ಕು.ನಿಧಿಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮೈಂಡ್ಸ್ ಯೋಜನೆ ಸಲಹೆಗಾರರಾದ ಕೆ.ಹೆಚ್ ಭಾಗ್ಯ ಪ್ರಾರ್ಥಿಸಿದರು,ಕಾರ್ಯಕ್ರಮಗಳ ಸಂವಹನ ಮತ್ತು ಸಂಯೋಜನಾಧಿಕಾರಿ ಶ್ರೀಮತಿ ತೆರಸಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

