ಆರು ತಿಂಗಳೊಳಗೆ ಕಾಂಗ್ರೆಸ್‍ನ ಉಚಿತ ಗ್ಯಾರಂಟಿಗಳ ಬಣ್ಣ ಬಯಲಾಗುತ್ತದೆ : ಶಾಸಕ ಎಂ.ಚಂದ್ರಪ್ಪ

3 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್,ಹೊಳಲ್ಕೆರೆ, (ಜೂ.04) : ರಾಜಕಾರಣಿಯಾದವನು ಪ್ರೀತಿ ವಿಶ್ವಾಸದಿಂದ ಜನರ ಮನಸ್ಸನ್ನು ಗೆಲ್ಲಬೇಕೆ ವಿನಃ ಭಾಷಣದಿಂದ ಅಲ್ಲ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತನ್ನ ಎದುರು ಸ್ಪರ್ಧಿಸಿ ಸೋಲುಂಡ ಕಾಂಗ್ರೆಸ್‍ನ ಹೆಚ್.ಆಂಜನೇಯನಿಗೆ ತಿರುಗೇಟು ನೀಡಿದರು.

ಹೊಳಲ್ಕೆರೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಭಾನುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಐದು ವರ್ಷಗಳ ಕಾಲ ಸಮಾಜ ಕಲ್ಯಾಣ ಸಚಿವನಾಗಿದ್ದ ಹೆಚ್.ಆಂಜನೇಯ ಚಿತ್ರಹಳ್ಳಿಯಲ್ಲಿ ನಾಲ್ಕು ಹಾಸ್ಟಲ್‍ಗಳನ್ನು ಕಟ್ಟಿಸಿ ದೊಡ್ಡ ಸಾಧನೆ ಮಾಡಿದ್ದೇನೆಂದು ಹೇಳಿಕೊಂಡು ತಿರುಗಿದರೆ ಏನು ಪ್ರಯೋಜನವಿಲ್ಲ.

ನಾನು ಗುಡ್ಡದ ತುಂಬಾ ಹಾಸ್ಟೆಲ್‍ಗಳನ್ನು ಕಟ್ಟಿಸಿದ್ದೇನೆ. ಹೈಟೆಕ್ ರೆಸಿಡೆನ್ಷಿಯಲ್ ಪಿ.ಯು.ಕಾಲೇಜು, ಗ್ರಾಮೀಣ ಭಾಗದಿಂದ ಬರುವ ಹೆಣ್ಣು ಮಕ್ಕಳಿಗೆ ಉತ್ತಮ ಜಾಗದಲ್ಲಿ ಅತ್ಯುತ್ತಮ ಡಿಗ್ರಿ ಕಾಲೇಜು ನಿರ್ಮಾಣವಾಗಿದೆ. ಆರು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಹಾಸ್ಟೆಲ್ ಕಟ್ಟಿಸಿದ್ದೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಇದ್ದಿದ್ದೆ. ಹುಚ್ಚನಂತೆ ಮಾತನಾಡಬೇಡ. ಬಾಯಿಗೆ ಹಿಡಿತವಿರಲಿ ಎಂದು ಎಚ್ಚರಿಸಿದರು.

ವಾಲ್ಮೀಕಿ ಸಮಾಜಕ್ಕೆ ದೊಡ್ಡ ಇತಿಹಾಸವಿದೆ. ಮಹಾಭಾರತದ ಮೂಲಕ ದೊಡ್ಡ ಹೆಸರು ಪಡೆದ ಏಕಲವ್ಯ, ರಾಮಾಯಣದ ವಾಲ್ಮೀಕಿ, ಭಕ್ತಿಗೆ ಬೇಡರ ಕಣ್ಣಪ್ಪ, ಮಮತೆ ಪ್ರೀತಿಗೆ ಹೆಸರುವಾಸಿಯಾದ ಶಬರಿಯನ್ನು ಸ್ಮರಿಸಿಕೊಂಡ ಎಂ.ಚಂದ್ರಪ್ಪ ನಾನು ಮೊಟ್ಟ ಮೊದಲು ಶಾಸಕನಾದಾಗ ವಾಲ್ಮೀಕಿ ಗುರುತು ಉಳಿಯಬೇಕೆಂದು ನಾನೆ ಹಣ ವಾಲ್ಮೀಕಿ ಭವನ ಕಟ್ಟಿಸಿಕೊಟ್ಟಿದ್ದೇನೆ. ಹೆಗಲ ಮೇಲೆ ಕೈಹಾಕಿಕೊಂಡು ಡ್ರಾಮ ಮಾಡುತ್ತ ನಾನೂ ಕೂಡ ಐದು ವರ್ಷ ಕಾಲ ಕಳೆಯಬಹುದಿತ್ತು ಅಂತಹ ಕೆಲಸ ಮಾಡಲಿಲ್ಲ. ನನಗೆ ಮತ ನೀಡಿದ ಮತದಾರರ ಋಣ ತೀರಿಸಬೇಕೆಂಬ ಅರಿವಿಟ್ಟುಕೊಂಡು ಹಗಲು-ರಾತ್ರಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಮತ್ತೆ ಗೆಲ್ಲಿಸಿ ಬಹುದೊಡ್ಡ ಜವಾಬ್ದಾರಿ ನೀಡಿದ್ದೀರಿ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

ಕಳೆದ ಚುನಾವಣೆಯಲ್ಲಿಯೂ ನಾನು ಗೆದ್ದು ಐದು ವರ್ಷಗಳು ಹೇಗೆ ಕಳೆಯಿತು ಎನ್ನುವುದೇ ಗೊತ್ತಾಗಲಿಲ್ಲ. ಸರ್ಕಾರದಿಂದ ಹಣ ಹೇಗೆ ತರಬೇಕು. ಯಾವ ರೀತಿ ಕ್ಷೇತ್ರವನ್ನು ಅಭಿವೃದ್ದಿಪಡಿಸಬೇಕು. ವಾಲ್ಮೀಕಿ ಸಮಾಜದ ಅಭಿವೃದ್ದಿಗೆ ಹೆಂಗೆ ಕೆಲಸ ಮಾಡಬೇಕು ಎನ್ನುವ ಜ್ಞಾನವಿಟ್ಟುಕೊಂಡು ದುಡಿದಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್‍ಬೊಮ್ಮಾಯಿ ಮೀಸಲಾತಿಯನ್ನು ಏಳು ಪರ್ಸೆಂಟ್‍ಗೆ ಹೆಚ್ಚಿಸಿ ಬಹು ದೊಡ್ಡ ತ್ಯಾಗ ಮಾಡಿದ್ದಾರೆ.

ಇದರಿಂದ ಅನೇಕರು ಐ.ಎ.ಎಸ್. ಐ.ಪಿ.ಎಸ್. ಹುದ್ದೆಗಳನ್ನು ಪಡೆಯಬಹುದು. ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳಾಗಬಹುದು. ಒಂಬತ್ತು ವರ್ಷಗಳಿಂದ ದೇಶದ ಪ್ರಧಾನಿ ಮೋದಿ ಅಕ್ಕಿ ಕೊಡುತ್ತಿದ್ದಾರಲ್ಲ. ಸಿದ್ದರಾಮಯ್ಯ ಅಕ್ಕಿ ಕೊಡುವುದೆ ಮುಖ್ಯವಾಯಿತ ಎಂದು ಜನತೆಯನ್ನು ಪ್ರಶ್ನಿಸಿದ ಶಾಸಕ ಎಂ.ಚಂದ್ರಪ್ಪ ಇನ್ನು ಆರು ತಿಂಗಳೊಳಗೆ ಕಾಂಗ್ರೆಸ್‍ನ ಉಚಿತ ಗ್ಯಾರಂಟಿಗಳ ಬಣ್ಣ ಬಯಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ಎಲ್ಲರಿಗೂ ಫ್ರೀ ಕೊಡಬೇಕು ಕಂಡಿಷನ್ ಹೇರಬಾರದು. ಕೊಡದೆ ಹೋದರೆ ಬಿಡಲ್ಲ. ಉಗ್ರ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದರು.

ಭಾರತ ದೇಶದ ಯಾವುದೇ ಮೂಲೆಯಲ್ಲಿ ವಾಲ್ಮೀಕಿ ಸಮಾಜ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡುತ್ತಿದ್ದರೆ ಅದೇ ಸಮಾಜಕ್ಕೆ ಕೊಡಬೇಕೆಂದು ಪ್ರಧಾನಿ ಮೋದಿ 2014 ರಲ್ಲಿ ಕಾನೂನು ಜಾರಿಗೆ ತಂದರು. ಸಮಾಜದ ಬಗ್ಗೆ ನನಗೆ ಕಳಕಳಿ ಜವಾಬ್ದಾರಿಯಿದೆ. ಅಧಿಕಾರ, ರಾಜಕೀಯ ಶಕ್ತಿ ಬಳಸಿಕೊಂಡು ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ. 26 ಎಕರೆ ಜಮೀನಿದೆ. ಮುಂದೆ ಮಳಿಗೆ ಕಟ್ಟಿದರೆ ಹಿಂದೆ ಏನು ಮಾಡಬೇಕು. ಅದಕ್ಕಾಗಿ ಎಲ್ಲರೂ ಸೇರಿ ಒಂದು ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಐದು ವರ್ಷಗಳ ಕಾಲ ಯಾರಿಗೂ ನೋವಾಗದಂತೆ ನಡೆದುಕೊಂಡಿದ್ದೇನೆ. ಯಾರ ವಿರುದ್ದ ಯಾರನ್ನು ಎತ್ತಿಕಟ್ಟಲಿಲ್ಲ. ಎಲ್ಲಿಯೂ ಗದ್ದಲ ಗಲಾಟೆ ಇಲ್ಲದಂತೆ ನೋಡಿಕೊಂಡಿದ್ದೇನೆ. ಕಾಂಗ್ರೆಸ್‍ನವರಿಗೆ ಈ ಅರಿವು ಇರಬೇಕು. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಎ.ಪಿ.ಎಂ.ಸಿ. ಹಾಗೂ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕಾಗಿರುವುದರಿಂದ ಎಲ್ಲರೂ ಒಂದಾಗೋಣ ಎಂದು ಹೇಳಿದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ಸುರೇಶ್‍ಗೌಡ್ರು, ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ, ಸದಸ್ಯರುಗಳಾದ ಮುರುಗೇಶ್, ಬಸವರಾಜ್ ಯಾದವ್, ಬಸವರಾಜ್, ತಿಪ್ಪೇಸ್ವಾಮಿ, ರಾಮಗಿರಿ ರಾಮಣ್ಣ, ಪಿ.ಎಸ್.ಮೂರ್ತಿ, ರಾಜಣ್ಣ, ಗೌರಿ ರಾಜ್‍ಕುಮಾರ್, ಕೆ.ಸಿ.ಮಹೇಶ್, ಲಿಂಗರಾಜ್, ಮಾರುತೇಶ್, ಕುಮಾರಪ್ಪ, ಬಿ.ಟಿ.ಬಸವರಾಜ್, ತಿಪ್ಪೇಸ್ವಾಮಿ, ಸುನೀಲ್, ಸಿದ್ದೇಶ್, ಮೂರ್ತಿ, ಕಣಿವೆಹಳ್ಳಿ ಜಗದೀಶ್, ಕೃಷ್ಣಮೂರ್ತಿ, ಕುಬೇರಪ್ಪ, ಶ್ರೀಮತಿ ಸರಸ್ವತಿ, ಶ್ರೀಮತಿ ಸಿದ್ದಮ್ಮ, ಶ್ರೀಮತಿ ಲಕ್ಷ್ಮಿ, ಶ್ರೀಮತಿ ಕರಿಯಮ್ಮ ಹಾಗೂ ವಾಲ್ಮೀಕಿ ಸಮಾಜದ ಮುಖಂಡರುಗಳು ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *