ಚಿತ್ರದುರ್ಗ : ರೈತ ವಿರೋಧಿ ಕರಾಳ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಂತೆ ರಾಜ್ಯ ಸರ್ಕಾರವೂ ಮೂರು ಕರಾಳ ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಎಚ್ಚರಿಸಿದರು.
ಬೀದರ್ ಜಿಲ್ಲೆ ಬಸವಕಲ್ಯಾಣದಿಂದ ಮಾ.1 ರಿಂದ ಆರಂಭಗೊಂಡಿರುವ ಜಾಥ ಶುಕ್ರವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆ.ಯಾದವರೆಡ್ಡಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆ ಹಾಗೂ ಗೋಹತ್ಯಾ ನಿಷೇಧ ಕಾಯಿದೆಯನ್ನು ರಾಜ್ಯ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯುವುದನ್ನು ಬಿಟ್ಟು ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ.
ಅಧಿವೇಶನದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದವರು ಯಾರೂ ರೈತ ವಿರೋಧಿ ಕಾಯಿದೆ ಬಗ್ಗೆ ಮಾತನಾಡಲಿಲ್ಲ. ಎಲ್ಲರೂ ರೈತ ವಿರೋಧಿಗಳಂತೆ ಕಾಣುತ್ತಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ದೆಹಲಿ ಗಡಿಯಲ್ಲಿ ವರ್ಷಗಟ್ಟಲೆ ಚಳುವಳಿ ನಡೆಸಿದ ಲಕ್ಷಾಂತರ ರೈತರಲ್ಲಿ ಏಳುನೂರು ರೈತರು ಸಾವಿಗೀಡಾದರೂ ಪ್ರಧಾನಿ ಮೋದಿ ಪರಿಹಾರ ಘೋಷಿಸಲಿಲ್ಲ. ಹೊಸ ಹೊಸ ಸಂಘರ್ಷಗಳಿಗೆ ಅವಕಾಶ ಕೊಡಬೇಡಿ ಎಂದು ಜಾಥದ ಮೂಲಕ ಸಂದೇಶ ರವಾನಿಸಿದರು.
ದೇಶದ ಎಲ್ಲಾ ರಾಜ್ಯಗಳೂ ರೈತ ವಿರೋಧಿ ಶಾಸನಗಳನ್ನು ಅನುಸರಿಸುತ್ತಿವೆ. ಅಧಿವೇಶನ ಮುಗಿಯುವ ಮುಂಚೆ ಕರಾಳ ಕೃಷಿ ಕಾಯಿದೆಗಳನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ರೈತರು ಬೀದಿಗಿಳಿಯಬೇಕಾಗುತ್ತದೆನ್ನುವುದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಜಾಥಾದ ಉದ್ದೇಶ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕರಾಳ ಕಾಯಿದೆಯಿಂದ ಆಗುವ ದುಷ್ಪರಿಣಾಮಗಳನ್ನು ಜನತೆಗೆ ತಿಳಿಸಿ ಜಾಗೃತಿಗೊಳಿಸುವ ಮೂಲಕ ಜಾಥಕ್ಕೆ ಬೆಂಬಲಿಸುವಂತೆ ಮನವಿ ಮಾಡಲಾಗುವುದು. ರಾಜ್ಯದ ಮೂರು ಕಡೆಯಿಂದ ಹೊರಟಿರುವ ಜನಾಂದೋಲನ ಮಹಾಮೈತ್ರಿ ಜಾಥ ಮಾ.15 ರಂದು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆದಂತೆ ರಾಜ್ಯ ಸರ್ಕಾರವೂ ರೈತ ವಿರೋಧಿ ಕರಾಳ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ರೈತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಮಾದವರೆಡ್ಡಿ ಮಾತನಾಡಿ ದೆಹಲಿ ಗಡಿಯಲ್ಲಿ ರೈತ ವಿರೋಧಿ ಕಾಯಿದೆಯನ್ನು ಧಿಕ್ಕರಿಸಿ ಲಕ್ಷಾಂತರ ರೈತರು ಒಂದು ವರ್ಷಗಳ ಕಾಲ ಚಳುವಳಿ ನಡೆಸಿದ್ದರ ಫಲವಾಗಿ ಪ್ರಧಾನಿ ಮೋದಿ ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆದರೆ ವಿನಃ ರೈತರ ಸಭೆ ಕರೆಯಲಿಲ್ಲ. ರೈತರ ತುಂಡು ಭೂಮಿಗಳನ್ನು ಕಸಿಯುವ ಕರ್ನಾಟಕ ಭೂಸುಧಾರಣಾ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕೂಡಲೆ ವಾಪಸ್ ಪಡೆಯಬೇಕು. ಅಧಿವೇಶನದಲ್ಲಿ ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆಯಬೇಕು. ಅದಕ್ಕಾಗಿ ರೈತರು, ಕಾರ್ಮಿಕರು ಪ್ರತಿ ಮನೆ ಮನೆಗೆ ಹೋಗಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ತಿಳಿಸಿ 2023 ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರೈತ ವಿರೋಧಿ ನೀತಿ ಅನುಸರಿಸುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ರೈತ ಮುಖಂಡರುಗಳಾದ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೊರಕೇರಪ್ಪ, ಧನಂಜಯ, ಸ್ವಾಮಿ, ಕಮ್ಯನಿಸ್ಟ್ ಮುಖಂಡ ಜಿ.ಸುರೇಶ್‍ಬಾಬು, ಗೌಸ್‍ಪೀರ್, ಎಂ.ಆರ್.ದಾಸೇಗೌಡ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.