ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯಲು ರೈತರು ಸುಧೀರ್ಘವಾಗಿ ಹೋರಾಟ ಮಾಡಿದ್ದಾರೆ. ಆ ಹೋರಾಟಕ್ಕೆ ಇಂದು ಫಲ ಸಿಕ್ಕಂತಾಗಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಈ ವಿಚಾರವನ್ನ ತಿಳಿಸಿದ್ದಾರೆ. ಎಲ್ಲೋ ನಾವೂ ತೆಗೆದುಕೊಂಡ ತೀರ್ಮಾನವೇ ತಪ್ಪಾಗಿದೆ. ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯುತ್ತಿದ್ದೇವೆ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಇದು ರೈತರಿಗೆ ಸಿಕ್ಕ ಗೆಲುವಾದರೂ ವಿರೋಧ ಪಕ್ಷಗಳು ಇದೊಂದು ಚುನಾವಣಾ ಗಿಮಿಕ್ ಎಂದಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಟ್ವೀಟ್ ಮಾಡಿದ್ದು, ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಏನನ್ನು ಸಾಧಿಸಲಾಗದೋ ಮುಂಬರುವ ಚುನಾವಣೆಯ ಭಯದಿಂದ ಅದನ್ನು ಸಾಧಿಸಲಾಗುವುದು. ಮೂರು ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳುವ ಪ್ರಧಾನಿ ಮೋದಿಯವರ ಈ ನಿರ್ಧಾರವೂ ಯಾವುದೇ ನೀತಿಯ ಬದಲಾವಣೆ ಅಥವಾ ಹೃದಯ ಬದಲಾವಣೆಯಲ್ಲ.ಇದು ಚುನಾವಣೆಯ ಭಯದಿಂದ ಪ್ರಚೋದಿಸಲ್ಪಟ್ಟಿದೆ. ಅದೇನೆ ಇರಲಿ ಇದು ರೈತರಿಗೆ ಹಾಗೂ ರೈತರ ಪರ ಅಚಲವಾಗಿ ನಿಂತ ಕಾಂಗ್ರೆಸ್ ಗೆ ಸಿಕ್ಕ ಜಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿ ರೈತರು ವರ್ಷದಿಂದ ಪ್ರತಿಭಟನೆ ನಡೆಸುತ್ತಲೇ ಇದ್ದರು. ಮಳೆಗೆ ನೆನೆದು, ಬಿಸಿಲಿಗೆ ಸುಟ್ಟಿದರು ಧರಣಿ ಜಾಗದಿಂದ ಕದಲಿರಲಿಲ್ಲ. 700 ಕ್ಕೂ ಹೆಚ್ಚು ರೈತರು ಇದರಿಂದಾಗಿ ಅಸುನೀಗಿದರು. ಆದ್ರೆ ಕೇಂದ್ರ ಸರ್ಕಾರ ಮಾತ್ರ ಜಪ್ಪಯ್ಯ ಎಂದಿರಲಿಲ್ಲ. ಈಗ ಕಾಯ್ದೆ ವಾಪಾಸ್ ತೆಗೆದುಕೊಂಡಿರುವುದು ವಿರೋಧ ಪಕ್ಷಗಳಿಗೆ ಆಶ್ಚರ್ಯ ಉಂಟು ಮಾಡಿದೆ. ಎಲ್ಲೆಡೆ ಚುನಾವಣೆ ಬರುತ್ತಿದ್ದು, ಸೋಲುವ ಭೀತಿಯಿಂದ ಹೀಗೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.