ಹಾಸನ : ವಿಧಾನ ಪರಿಷತ್ ಚುನಾವಣಾ ದಿನಾಂಕ ನಿಗದಿಯಾಗಿದೆ. ಪಕ್ಷಗಳು ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತಿದ್ದಾರೆ. ಹಾಸನದಲ್ಲಿ ಈ ಬಾರಿ ರೇವಣ್ಣ ಅವರ ಜೇಷ್ಠ ಪುತ್ರ ಸೂರಜ್ ರೇವಣ್ಣ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಎಂ ಶಂಕರ್ ಸ್ಪರ್ಧೆಗೆ ನಿಂತಿದ್ದಾರೆ.
ಈ ಸಂಬಂಧ ಮಾತನಾಡಿರುವ ಎಂ ಶಂಕರ್, ನವಂಬರ್ 23ಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಹೋಗಿ ನಾಮಪತ್ರ ಸಲ್ಲಿಸುತ್ತೇನೆ. 30 ವರ್ಷದಿಂದ ಕಾಂಗ್ರೆಸ್ ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ದೇವೇಗೌಡರ ಕುಟುಂಬದ ಜೊತೆ ಗೆಲುವು ಕಷ್ಟವೇನಲ್ಲ ಸೂರಜ್ ರೇವಣ್ಣ ವಿರುದ್ದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನ ಕೂಡ ಬದಲಾವಣೆ ಬಯಸುತ್ತಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ಯಾರಿಗೆ ಮತ ಹಾಕಬೇಕು ಎಂಬುದು ಜನರಿಗೂ ತಿಳಿದಿದೆ. ನಾನು ಬೂತ್ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಕಾರ್ಯಕರ್ತರು, ಮುಖಂಡರು ನನ್ನ ಜೊತೆಗೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ಮತ ಚಲಾಯಿಸುವವರು ಸಾಮಾನ್ಯರಲ್ಲ. ಈಗಾಗಲೇ ಚುನಾಯಿತರಾದವರು ಮತ ಚಲಾಯಿಸುವುದರಿಂದ ಯೋಚನೆ ಮಾಡಿ ಮತ ಚಲಾಯಿಸುತ್ತಾರೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.