ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.08) : ಬೇರೆ ಯಾವ ಸಮುದಾಯಗಳನ್ನು ಜೋಡಿಸದೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿರುವುದು ಬಹುದೊಡ್ಡ ವಿಶೇಷ ಎಂದು ಬಿಜೆಪಿ. ರಾಜ್ಯ ಪ್ರಕೋಷ್ಠಗಳ ಸಹ ಸಂಚಾಲಕ ಡಾ.ಶಿವಯೋಗಿಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ ರಸ್ತೆಯಲ್ಲಿರುವ ಜಗಳೂರು ಮಹಲಿಂಗಪ್ಪ ಟವರ್ ನಲ್ಲಿ ಶನಿವಾರ ನಡೆದ ಚುನಾವಣಾ ನಿರ್ವಹಣಾ ಸಮಿತಿ ಜಿಲ್ಲಾ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸದಾಶಿವ ಆಯೋಗದ ವರದಿಯನ್ವಯ ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದು ಹಾಗೂ ಎರಡು ಬಿ. ಅಡಿಯಲ್ಲಿ ಮುಸಲ್ಮಾನರಿಗಿದ್ದ ನಾಲ್ಕು ಪರ್ಸೆಂಟ್ ಮೀಸಲಾತಿಯನ್ನು ರದ್ದುಪಡಿಸಿ ಒಕ್ಕಲಿಗರಿಗೆ ಹಾಗೂ ಲಿಂಗಾಯಿತರಿಗೆ ತಲಾ ಎರಡು ಪರ್ಸೆಂಟ್ ಮೀಸಲಾತಿ ಹೆಚ್ಚಿಸಿರುವುದನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ದಿನಕ್ಕೆ ಎರಡು ಗಂಟೆಯಾದರೂ ಸುತ್ತಾಡಿ ಎಸ್ಸಿ.ಎಸ್ಟಿ.ಗಳಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಇನ್ನೂರು ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ರಾಜ್ಯ ಬಿಜೆಪಿ.ಸರ್ಕಾರ ಈಗಾಗಲೆ ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ.
ಅಪ್ಪರ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಕಾಯಕ ಯೋಗಿಗಳಿಗೆ ಆರ್ಥಿಕ ನೆರವು ನೀಡಿರುವುದು ನಮ್ಮ ಸರ್ಕಾರದ ಸಾಧನೆ ಎನ್ನುವುದನ್ನು ಕ್ಷೇತ್ರಾದ್ಯಂತ ಮತದಾರರಿಗೆ ತಿಳಿಸಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಚುನಾವಣೆಯಲ್ಲಿ ಬದ್ದತೆ, ಸಹಕಾರ, ಶ್ರದ್ದೆ ಹಾಗೂ ಬೇರೆ ಪಕ್ಷದ ಮತಗಳನ್ನು ನಮ್ಮ ಮತಗಳನ್ನಾಗಿ ಪರಿವರ್ತಿಸುವುದು ನಿಮ್ಮ ಮೇಲಿರುವ ಬಹುದೊಡ್ಡ ಜವಾಬ್ದಾರಿ. ನಮ್ಮ ದೇಶಕ್ಕೆ ಮೋದಿ ಬೇಕೋ, ರಾಹುಲ್ ಬೇಕೋ ಎಂದು ಕೇಳಿದರೆ ಮೋದಿ ಬೇಕು ಎಂದು ಜನ ಹೇಳುವಂತೆ ಮನ ಪರಿವರ್ತನೆ ಮಾಡುವುದೇ ಪಕ್ಷದ ಕಾರ್ಯಕರ್ತರಿಗಿರುವ ತಾಕತ್ತು. ಕೋವಿಡ್ ಸಂದರ್ಭದಲ್ಲಿ ಎಂಬತ್ತು ಕೋಟಿ ಜನರಿಗೆ ಉಚಿತ ಪಡಿತರ ನೀಡಿರುವುದು ಸಣ್ಣ ಕೆಲಸವಲ್ಲ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನಿಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಗಧಿತ ಸಮಯದಲ್ಲಿ ಮುಗಿಸುವಂತೆ ವಿನಂತಿಸಿದರು.
ಅಭ್ಯರ್ಥಿ ಅವರಾಗಬೇಕಿತ್ತು.
ಇವರಾಗಬೇಕಿತ್ತು ಎಂದು ನಿರೀಕ್ಷಿಸುವುದಕ್ಕಿಂತ ಯಾರೆ ಅಭ್ಯರ್ಥಿಯಾಗಲಿ ಗೆಲುವಿಗೆ ನಿಸ್ವಾರ್ಥವಾಗಿ ಶ್ರಮಿಸಿ ಪಕ್ಷ ಅಧಿಕಾರಕ್ಕೆ ತಂದು ಗೆಲುವಿನ ಹೊಸ್ತಿಲಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಚುನಾವಣೆ ಮಾಡಬೇಕಿದೆ. ಚುನಾವಣೆಯನ್ನು ಯದ್ದದ ರೀತಿಯಲ್ಲಿ ಎದುರಿಸಬೇಕಾಗಿರುವುದರಿಂದ ಬಿಲ್ಲು, ಬಾಣ ಅಸ್ತ್ರಗಳು ಬತ್ತಳಿಕೆಯಲ್ಲಿರಬೇಕು.
ಕಾಂಗ್ರೆಸ್‍ನವರು ಅಧರ್ಮ ಗೆಲ್ಲಬೇಕೆಂದು ಹೊರಟಿರುವ ಈ ಸಂದರ್ಭದಲ್ಲಿ ಧರ್ಮ ಗೆಲ್ಲಬೇಕೆಂಬುದು ನಮ್ಮ ಮಂತ್ರವಾಗಬೇಕು. ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದಾಗ ಮಾತ್ರ ವಿಧಾನಸೌಧದಲ್ಲಿ ಕುಳಿತು ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗೆ ಧ್ವನಿ ಎತ್ತಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಯಾವ ಕೆಲಸವನ್ನು ಕೀಳು ಚಿಕ್ಕದು ಎಂದು ಭಾವಿಸಬಾರದು. ಚುನಾವಣಾ ನಿರ್ವಹಣಾ ಸಮಿತಿ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿ ಮುಗಿಸಿದಾಗ ಒಂದಲ್ಲ ಒಂದು ದಿನ ಪಕ್ಷ ನಿಮ್ಮನ್ನು ಗುರುತಿಸಿ ಅಧಿಕಾರ ನೀಡುತ್ತದೆ ಎನ್ನುವುದಕ್ಕೆ ನಾನು ವಿಧಾನಪರಿಷತ್ ಸದಸ್ಯನಾಗಿರುವುದೇ ಸಾಕ್ಷಿ ಎಂದು ಹೆಮ್ಮೆಯಿಂದ ಬೀಗಿದರು.
ಐದು ವರ್ಷ ಏನು ಕೆಲಸ ಮಾಡಿದ್ದೇವೆನ್ನುವುದಕ್ಕಿಂತ ಚುನಾವಣೆ ಸಂದರ್ಭದಲ್ಲಿ ಪಕ್ಷ ನೀಡಿರುವ ಹೊಣೆಗಾರಿಕೆಯನ್ನು ಎಷ್ಟರ ಮಟ್ಟಿಗೆ ನಿಭಾಯಿಸಿದ್ದೇವೆನ್ನುವುದು ಇಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಜಿಲ್ಲೆಯಲ್ಲಿ ಪೇಜ್ ಪ್ರಮುಖರನ್ನು ನೇಮಿಸಿ ಪಕ್ಷ ಕಟ್ಟಿದ್ದೇವೆ. ಎಲ್ಲದರಲ್ಲೂ ಹುಳಿ ಹಿಂಡುವ ಕೆಲಸವಾಗಬಾರದು. ರಾಜ್ಯದಲ್ಲಿ ಬಿಜೆಪಿ.ಅಧಿಕಾರಕ್ಕೆ ಬರಬೇಕು. ಆದರೆ ನಮ್ಮ ಕ್ಷೇತ್ರದಲ್ಲಿ ಗೆಲ್ಲಬಾರದು ಎನ್ನುವ ಮನೋಭಾವನೆಯನ್ನು ತಲೆಯಿಂದ ತೆಗೆದು ಹಾಕಿ. ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಲ್ಲ. ಪಕ್ಷಕ್ಕೆ ಗೆಲುವು ಸಿಗಬೇಕೆಂಬ ದೃಷ್ಟಿಯಿಟ್ಟುಕೊಂಡು ಕೆಲಸ ಮಾಡಿ. ಅದಕ್ಕಾಗಿ ನಿರಂತರ ಪ್ರವಾಸ ಕೈಗೊಳ್ಳುತ್ತೇವೆಂದು ಹೇಳಿದರು.
ಚುನಾವಣಾ ಸಂಚಾಲಕ ಸಂಪತ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕರಾದ ಮಲ್ಲಿಕಾರ್ಜುನ್ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾರ್ಯದರ್ಶಿಗಳಾದ ಎ.ರೇಖ, ಶ್ಯಾಮಲ ಶಿವಪ್ರಕಾಶ್, ಸಿಂಧು ಅಶೋಕ, ಯುವ ಮುಖಂಡ ಡಾ.ಸಿದ್ದಾರ್ಥ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಕೆ.ಶಿವಣ್ಣಾಚಾರ್, ಮನೋಜ್ ಹೊಸಮನೆ, ಶಂಭು, ಕಿರಣ್ ಡಿ.ಎಸ್.ಹಳ್ಳಿ, ಯಶವಂತ್, ವೆಂಕಿ ಯಾದವ್, ರೂಪ ಸುರೇಶ್ ಸೇರಿದಂತೆ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರುಗಳು ಕಾರ್ಯಾಗಾರದಲ್ಲಿ ಹಾಜರಿದ್ದರು.