ಚಳ್ಳಕೆರೆ : ಬದುಕನ್ನು ಅರ್ಥೈಸುವ ಸಾಹಿತ್ಯ ಕೇಳುವ ಮತ್ತು ಪ್ರೋತ್ಸಾಹಿಸುವ ಇಚ್ಚಾಸಕ್ತಿ ಸಮಾಜದಲ್ಲಿ ಕಾಣುತ್ತಿಲ್ಲ ಎಂದು ಬಿಇಒ ಕೆ.ಎಸ್. ಸುರೇಶ್ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಶನಿವಾರ ಗ್ರಾಮೀಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ ಕಾರ್ಯಕ್ರಮದಲ್ಲಿ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಭಾವರೂಪ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಸ್ತುತ ವೈರಾಗ್ಯ ಸಮಾಜದಲ್ಲಿ ಆಡಂಬರ ಮತ್ತು ರಾಜಕೀಯ ಬಯಸುವ ಸಂಖ್ಯೆ ಕಾಣುತ್ತಿದ್ದೇವೆ. ನಗರ ಶೈಲಿಗೆ ಮಾರು ಹೋಗುತ್ತಿರುವು ಹಳ್ಳಿಗಳಲ್ಲೂ ಜೀವನದ ಸೊಗಡು, ಸಂಸ್ಕೃತಿ ಉಳಿದುಕೊಳ್ಳುತ್ತಿಲ್ಲ. ಇದರಿಂದ ಜೀವನದ ಸಾರ್ಥಕತೆ ಕಂಡುಕೊಳ್ಳಲಾಗದೆ, ಬೆಚ್ಚಿ ಬೀಳಿಸುವ ಘಟನೆಗಳ ಹಿಂದೆ ಹೋಗುತ್ತಿದ್ದೇವೆ.
ಇಂತಹ ಮನಸ್ಥಿತಿಯ ಬದಲಾವಣೆಗೆ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದ ಅವರು, ಸಾಹಿತ್ಯ ರಚನೆಕಾರರು ಹಳ್ಳಿಯಾಗಲೀ, ದೇಶದ ಯಾವುದೇ ಭಾಗದಲ್ಲಿರಲಿ ಭಾವನೆ ಒಂದೇ ಇರುತ್ತದೆ. ಆದ್ದರಿಂದ ಸಾಹಿತ್ಯ ಜನಜೀವನದ ಅಂತಃಸತ್ವವಾಗಿರುತ್ತದೆ. ಸುಮಾರು ವರ್ಷಗಳಿಂದ ಸಾಹಿತ್ಯ ಅಭಿರುಚಿಯಲ್ಲಿರುವ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಸಾಹಿತ್ಯ ರಚನೆ ಸಮಾಜಮುಖಿಯಾಗಿದೆ ಎಂದು ಹೇಳಿದರು.
ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯ ಸಾಂಸ್ಕøತಿಕ ನೆಲೆಗಟ್ಟಿನ ಪರಂಪರೆ ಇದೆ. ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ. ಬದುಕಿನೊಟ್ಟಿಗೆ ಇದನ್ನು ಉಳಿಸಿಕೊಳ್ಳುವ ಇಚ್ಚಾಸಕ್ತಿ ಜನಮಾಸದಲ್ಲಿ ಕಾಪಾಡಿಕೊಳ್ಳಬೇಕಿದೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಜಿ.ಎಸ್. ಶಿವರುದ್ರಪ್ಪ, ಆರಾಸೇ ಮಹನೀಯರು ಸೂಚಿತ ಗ್ರಾಮೀಣ ಸಾಹಿತ್ಯ ಪರಿಷತ್ತು ಹೆಸರಿನಡಿ ಸುಮಾರು 32 ವರ್ಷಗಳ ಕಾಲ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರಿಂದ ಗ್ರಾಮೀಣ ಜನಜೀವನದ ಸೊಗಡು, ಜೀವನ ಶೈಲಿ ಮತ್ತು ಜನಪದರ ನೋವು-ದುಮ್ಮಾನವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಿದೆ. ಪ್ರತಿಭಾವಂತ ಬರಹಗಾರರಿಗೆ ವೇದ, ಋಗ್ವೇದ, ರಾಮಾಯಣ, ಮಹಾಭಾರತ ಅಧ್ಯಯನ ಮಾಡಿಕೊಳ್ಳಲು ಪುಸ್ತಕಗಳ ಸಂಗ್ರಹ ಮಾಡಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವ ಮನಸ್ಸುಗಳ ಸಂಖ್ಯೆ ಬೆಳೆಯಬೇಕಿದೆ ಎಂದ ಅವರು, ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಕೆಲ ಕವಿತೆಗಳು ವಿದ್ಯಾರ್ಥಿಗಳಿಗೆ ಪಠ್ಯ ವಿಷಯವಾಗುವ ಅರ್ಹತೆ ಇವೆ ಎಂದು ಭವಿಷ್ಯ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಗ್ರಾಮೀಣ ಭಾಗದಲ್ಲಿ ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ತಿಪ್ಪಣ್ಣ ಮರಿಕುಂಟೆ ಅವರ ಸಾಹಿತ್ಯ ಬದುಕು ಸಮಾಜಕ್ಕೆ ಮಾದರಿಯಾಗಿದೆ. ಗಾಮದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮತ್ತು ಒಂದು ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡುವ ಇಚ್ಚಾಸಕ್ತಿ ಇದೆ. ಸಾಹಿತ್ಯ ಕಾರ್ಯವನ್ನು ಪ್ರೋತ್ಸಾಹಿಸಿದಾಗ ಮಾತ್ರ ಸಮೃದ್ದ ಭಾಷಾಭಿಮಾನವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಕೆ.ಎಸ್. ರಾಘವೇಂದ್ರ ಉದ್ಘಾಟಿಸಿದರು.
ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ವೀರಭದ್ರಪ್ಪ, ದೊಡ್ಡಯ್ಯ, ಪೂಜಾರಿ ಗೋವಿಂದಪ್ಪ, ಮಂಜುನಾಥ, ರಾಜಶೇಖರ, ರಾಜಣ್ಣ ಮತ್ತಿತರರು ಇದ್ದರು.