ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೂಡಾ ಕೇಸು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೂ ಸೂಚನೆ ನೀಡಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಆತಂಕ ಶುರುವಾಗಿದೆ. ಹಾಗಾದ್ರೆ ಸಿದ್ದರಾಮಯ್ಯ ಅವರಿಗೆ ನಿರೀಕ್ಷಣಾ ಜಾಮೀನು ಪಡೆಯುವ ಸಾಧ್ಯತೆ ಇದೆಯಾ..? ಈ ಕೇಸನ್ನ ಸಿಬಿಐಗೆ ವಹಿಸಿದರೆ ಏನು ಮಾಡೋದು ಎಂಬೆಲ್ಲಾ ಪ್ರಶ್ನೆಗಳು ಈ ಕೇಸಲ್ಲಿ ಹಲವರಿಗೆ ಕಾಡುತ್ತಿದೆ.
ಈ ಬಗ್ಗೆ ಲಾಯರ್ ರಾಮಮೂರ್ತಿಯವರು ಖಾಸಗಿ ಚಾನೆಲ್ ಒಂದರಲ್ಲಿ ಮಾಹಿತಿ ನೀಡಿದ್ದು ಹೀಗಿದೆ. ನ್ಯಾಯಾಲಯದ ಆದೇಶ ಇರುವ ಕಾರಣ ಅವರು ಈಗಲೇ ಎಫ್ಐಆರ್ ದಾಖಲಿಸಲೇಬೇಕಿದೆ. ತನಿಖೆ ಶುರುವಾದಾಗ ಸತ್ಯಾಂಶ ಹೇಗೆ ಹೊರಗೆ ಬರುತ್ತದೋ ಆಮೇಲೆ ಆರೋಪಿಗಳ ಪಟ್ಟಿ ಬದಲಾಗುತ್ತದೆ ಎಂದು ಆರೋಪ ಪಟ್ಟಿ ವಿಚಾರಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ನಿರೀಕ್ಷಣಾ ಜಾಮೀನಿನ ಬಗ್ಗೆ ಮಾತನಾಡಿ, ಅದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಆರೋಪಿಗಳಿಗೆ ಬಂಧನದ ಭೀತಿ ಎದುರಾದರೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಬಂಧನವೇನು ಆಗಲ್ಲ ಎಂದಾದರೆ ಜಾಮೀನಿಗೆ ಅರ್ಜಿ ಸಲ್ಲಿಸಲ್ಲ ಎಂದಿದ್ದಾರೆ.
ಕೇಸನ್ನು ಸಿಬಿಐಗೆ ವಹಿಸುವ ಬಗ್ಗೆ ಮಾತನಾಡಿ, ಎಫ್ಐಆರ್ ದಾಖಲಾದ ತಕ್ಷಣ ಲೋಕಾಯುಕ್ತ ಪೊಲೀಸರಿಗೆ ಎಲ್ಲಾ ಅಧಿಕಾರ ಬರುತ್ತದೆ. ಯಾವ ವಸ್ತುವನ್ನಾದರೂ ಸೀಜ್ ಮಾಡಬಹುದು, ಯಾರನ್ನಾದರೂ ತನಿಖೆ ಮಾಡಬಹುದಾಗಿರುತ್ತದೆ. ಈ ವಿಷಯದ ಒಳಹೊಕ್ಕು ತನಿಖೆ ಮಾಡಬೇಕಾಗುತ್ತದೆ. ಕೆಲವರು ಈಗಾಗಲೇ ಲೋಕಾಯುಕ್ತ ಪೊಲೀಸ್ ತನಿಖೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸಿಬಿಐಗೆ ವಹಿಸುವುದಕ್ಕೆ ಹೈಕೋರ್ಟ್ ಗೆ ಮಾತ್ರ ಅನುಮತಿ ಇದೆ. ಬೇರೆ ಯಾರೂ ಕೂಡ ಸಿಬಿಐಗೆ ವಹಿಸುವಂತೆ ಇಲ್ಲ. ಇಲ್ಲಂದ್ರೆ ರಾಜ್ಯ ಸರ್ಕಾರ ವಹಿಸಬಹುದಾಗಿದೆ ಎಂದಿದ್ದಾರೆ.