ಚುನಾವಣೆ ಸಮೀಪಿಸುತ್ತಿದ್ದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಜನ ಹೋರಾಟಕ್ಕೆ ಇಳಿದಿದ್ದಾರೆ. ಅತ್ತ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಮೀಸಲಾತಿಯ ಹೋರಾಟ ಜಾಸ್ತಿಯಾಗಿದೆ. ಎಸ್ಸಿ/ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿದ್ದೆ ತಡ, ಬೇರೆ ಬೇರೆ ಸಮುದಾಯದವರು ನಮಗೂ ಹೆಚ್ಚಿಸಿ ಎನ್ನುತ್ತಿದ್ದಾರೆ.
ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ನಿನ್ನೆ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆ ಬಳಿಕ ಒಕ್ಕಲಿಗ ಸಚಿವರು, ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿತ್ತು. ಶೇ.4ರಷ್ಟಿರೋ ಮೀಸಲಾತಿಯನ್ನು ಶೇ. 12ಕ್ಕೆ ಏರಿಕೆ ಮಾಡುವಂತೆ ಬೆಳಗಾವಿಯ ಸುವರ್ಣಸೌಧದಲ್ಲಿರುವ ಸಿಎಂ ಕಚೇರಿಗೆ ಭೇಟಿ ನೀಡಿ, ಮನವಿ ಸಲ್ಲಿಸಿದ್ದಾರೆ.
ಈ ವೇಳೆ “ಅಶೋಕ್ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದವರು ಮನವಿಯನ್ನು ನೀಡಿದ್ದಾರೆ. ಆ ಮನವಿಯಲ್ಲಿ ಮೀಸಲಾತಿ ಬಗ್ಗೆ ಕೇಳಿದ್ದಾರೆ. ಈ ಹಿಂದೆ ನಿರ್ಮಲಾನಂದ ಸ್ವಾಮೀಜಿಗಳು ಕೂಡ ಮೀಸಲಾತಿ ವಿಚಾರಕ್ಕೆ ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ, ಪರಿಶೀಲನೆಗೆ ಕಳುಹಿಸಿದ್ದೇವೆ” ಎಂದಿದ್ದಾರೆ.
ಸದ್ಯ ಚುನಾವಣೆ ಹತ್ತಿರವಾಗುತ್ತಿದೆ. ಬಿಜೆಪಿಯನ್ನೇ ಅಧಿಕಾರಕ್ಕೆ ತರಬೇಕು ಎಂದು ಪಣ ಪಕ್ಷದ ನಾಯಕರು ಪಣ ತೊಟ್ಟಿದ್ದಾರೆ. ಈ ಬಾರಿ ಹಳೆ ಮೈಸೂರು ಭಾಗವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಆದ್ರೆ ಅದು ಜೆಡಿಎಸ್ ಭದ್ರಕೋಟೆಯಾಗಿದೆ. ಒಕ್ಕಲಿಗ ಸಮುದಾಯವೂ ಹೆಚ್ಚಾಗಿದ್ದು, ಈಗ ಮೀಸಲಾತಿ ಹೆಚ್ಚಳವಾದರೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯೂ ಇದೆ.