ಕೊಡಗು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಹಲವರಿಗೆ ಕ್ಷೇತ್ರ ಬಿಟ್ಟು ಕೊಡುವ ಆತಂಕ ಎದುರಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗವನ್ನು ಜೆಡಿಎಸ್ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹೀಗಾಗಿ ಪ್ರತಾಪ್ ಸಿಂಹ ತಮ್ಮ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಉತ್ತರ ನೀಡಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರೇ ನಿಂತರೂ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ಮೈಸೂರು – ಕೊಡಗು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಮಾಹಿತಿ ಇಲ್ಲ. ಹಾಗಂತ ಮೈಸೂರು – ಕೊಡಗು ಕ್ಷೇತ್ರ ನಮ್ಮಪ್ಪನ ಆಸ್ತಿಯೂ ಅಲ್ಲ. ಆದರೆ ಬಿಜೆಪಿಯಲ್ಲಿ ಯಾರನ್ನೇ ನಿಲ್ಲಿಸಿದರೂ ಈ ಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದಿದ್ದಾರೆ.
ಇದೇ ವೇಳೆ ಕೊಡಗು ಪೊಲೀಸ್ ಇಲಾಖೆಯ ವಿರುದ್ಧವೂ ಗರಂ ಆಗಿದ್ದಾರೆ. ತೆಲಂಗಾಣಕ್ಕೆ 42 ಕೋಟಿ ಲೂಟಿ ಹಣ ಕಳುಹಿಸಿದ್ದಾರೆಂದು ಬಿಜೆಪಿ ಆರೋಪ ಮಾಡಿತ್ತು. ಆದರೆ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡಿದ್ದಾರೆ. ಠಾಣೆಗೆ ಮುಚ್ಚಳಿಕೆ ಬರೆದುಕೊಡಬೇಕಾಗಿರುವುದು ಡಿಕೆ ಶಿವಕುಮಾರ್. ಮೊದಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಳಿ ಮುಚ್ಚಳಿಕೆ ಬರೆಸಿಕೊಳ್ಳಿ. ಬಿಜೆಪಿ ವಿರುದ್ಧ ಕಮೀಷನ್ ಆರೋಪ ಮಾಡಿ, ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಪೇಸಿಎಂ ಎಂದು ಪೋಸ್ಟರ್ ಹಾಕಿದರು. 40% ಎಂದು ಊರಿಗೆಲ್ಲಾ ತಮಟೆ ಹೊಡೆದರು. ಹೀಗಾಗಿ ಮೊದಲು ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಿ ಎಂದಿದ್ದಾರೆ.