ಬೆಂಗಳೂರು: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಬೆನ್ನಲ್ಲೇ ಪಕ್ಷಗಳು ಚುನಾವಣಾ ತಯಾರಿಯಲ್ಲಿವೆ. ಅದಷ್ಟೇ ಅಲ್ಲದೆ ಸದ್ಯ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ ಸದ್ದು ಮಾಡುತ್ತಿದೆ. ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿಯಲ್ಲಿರುವವರನ್ನು ಸೆಳೆಯುತ್ತಿರುವ ಬಗ್ಗೆ ಚರ್ಚೆ ಶುರುವಾಗಿದೆ.
ಈ ಬಗ್ಗೆ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ಬಿಜೆಪಿ ಪಕ್ಷ ಬಹಳ ಗೌರವದಿಂದ ನೋಡುತ್ತಿದೆ. ಇಲ್ಲಿಯವರೆಗೂ ಯಾರೂ ಏಕವಚನದಲ್ಲಿ ಕೂಡ ಮಾತನಾಡಿಲ್ಲ. ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುವ ಯಾವುದೇ ಯೋಚನೆ ನನಗೆ ಇಲ್ಲ. ಅಂಥ ಪರಿಸ್ಥಿತಿ ಬಂದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
17 ಜನರಲ್ಲಿ ಯಾರೂ ಹೋಗ್ತಾರೋ ಗೊತ್ತಿಲ್ಲ. 16 ಜನ ಹೋದರೂ ಕೂಡ ನಾನಂತು ಬಿಜೆಪಿ ಬಿಟ್ಟು ಹೋಗಲ್ಲ. ಬೇಕಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮತ್ತೆ ಕಾಂಗ್ರೆಸ್ ಗೆ ಹೋಗುವ ಮಾತೇ ಇಲ್ಲ. ಬೆಂಗಳೂರಿನ ಸಚಿವರಾಗಿದ್ದರಿಂದ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೀನಿ. ಯಾರಾದ್ರೂ ಅವರ ಮನೆಗೆ ಹಿಂಬಾಗಿಲಿನಿಂದ ಹೋಗಿದ್ದಾರಾ.? ಬುರ್ಖಾ ಹಾಕಿಕೊಂಡು ಹೋಗಿದ್ದಾರಾ..? ಮೊದಲು ಅವರ ಶಾಸಕರಿಗೆ ಅನುದಾನ ನೀಡಲಿ, ನಂತರ ನಮಗೆ.
ಡಿಕೆಶಿ ಜೊತೆಗೆ ರಾಜಕೀಯ ಸಂಬಂಧ ಹೊಂದಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾರೂ ಬೇಕಾದರೂ ಮಾತನಾಡಬಹುದು. ಅದಕ್ಕೆಲ್ಲಾ ರಾಜಕೀಯ ಬಣ್ಣ ಕಟ್ಟಬಾರದು. ನೀನು ರಾಜೀನಾಮೆ ಕೊಟ್ಟರೆ ನಾವೂ ನಿಮ್ಮ ಕ್ಷೇತ್ರದ ಅಭಿವೃದ್ಧಿ ಮಾಡ್ತೀವಿ ಅನ್ನೋದಾದ್ರೆ ನಾನು ಅದಕ್ಕೂ ಸಿದ್ಧ. ಡಿಕೆ ಶಿವಕುಮಾರ್ ಅವರು ಮೊದಲು ಏನಾಗಿ ಉತ್ತರ ಕೊಡುತ್ತಿದ್ದಾರೆ ಎಂಬುದು ಗಮನವಿರಲಿ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಉತ್ತರ ನೀಡಿತ್ತಿದ್ದಾರಾ..? ಅಥವಾ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಉತ್ತರ ನೀಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.