ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಚುನಾವಣೆ ಘೋಷಣೆಯಾಗುವುದಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಅದಾಗಲೇ ಎಲ್ಲಾ ರೀತಿಯ ಪ್ರಚಾರಗಳು ಶುರುವಾಗಿದೆ. ಇನ್ನು ರಾಜಕೀಯದಾಟದಲ್ಲಿ ಸೋಲು ಗೆಲುವಿನ ಲೆಕ್ಕಾಚಾರವೂ ಗರಿಗೆದರಿದೆ. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಜೋರಾಗಿದೆ. ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಟಿಕೆಟ್ ಪೈಪೋಟಿ ಈಗ ಕಾಂಗ್ರೆಸ್ ಗೆ ವರವಾಗುವ ಸಾಧ್ಯತೆ ಇದೆ.
ತುಮಕೂರು ಜಿಲ್ಲೆ ರಾಜ್ಯದಲ್ಲಿ ಎರಡನೇ ದೊಡ್ಡ ಜಿಲ್ಲೆಯಾಗಿದೆ. ಇಲ್ಲಿ ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ 1994ರಿಂದ ಬಿಜೆಪಿ ಅಧಿಪತ್ಯ ಶುರುವಾಗಿತ್ತು. ಸೊಗಡು ಶಿವಣ್ಣ ಶಾಸಕರಾಗಿ ಆಯ್ಕೆಯಾಗುವ ಮೂಲಕ ತುಮಕೂರಲ್ಲಿ ಬಿಜೆಪಿ ಆಡಳಿತ ಶುರು ಮಾಡಿತ್ತು. ಅದು ನಾಲ್ಕು ಬಾರಿ.
ಬಳಿಕ 2013ರಲ್ಲಿ ರಫೀಕ್ ಅಹ್ಮದ್ ಶಾಸಕರಾಗಿ ಆಯ್ಕೆಯಾಗುವ ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದ್ರೆ 2019ರಲ್ಲಿ ನಗರದಲ್ಲಿ ಬಿಜೆಪಿಯ ಜ್ಯೋತಿ ಗಣೇಶ್ ಹಾಗೂ ಗ್ರಾಮಾಂತರದಲ್ಲಿ ಜೆಡಿಎಸ್ ನ ಗೌರಿಶಂಕರ್ ಅಧಿಕಾರವಿದೆ. ಈಗ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಸೊಗಡು ಶಿವಣ್ಣ ಮತ್ತು ಜ್ಯೋತಿ ಗಣೇಶ್ ನಡುವೆ ಟಿಕೆಟ್ ಫೈಟ್ ಶುರುವಾಗಿದೆ.
2013ರಲ್ಲಿಯೂ ಇಂಥದ್ದೊಂದು ಸ್ಪರ್ಧೆ ಏರ್ಪಟ್ಟಿತ್ತು. ಕೆಜಿಪಿಯಿಂದ ಜಿ ಬಿ ಜ್ಯೋತಿ ಗಣೇಶ್ ಹಾಗೂ ಬಿಜೆಪಿಯಿಂದ ಸೊಗಡು ಶಿವಣ್ಣ ಸ್ಪರ್ಧೆ ಮಾಡಿದ್ದರು. ಆಗ ವೀರಶೈವ ಮತಗಳು ವಿಭಜನೆಗೊಂಡು ಇಬ್ಬರ ಸೋಲಿಗೆ ಕಾರಣವಾಗಿತ್ತು. ಇದೀಗ ಇಬ್ಬರು ಟಿಕೆಟ್ ಆಕಾಂಕ್ಷಿಗಳಾಗಿರುವ ಕಾರಣ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯೇ ಹೆಚ್ಚಾಗಿದೆ. ಈ ಬಾರಿಯೂ ನಗರದಲ್ಲಿ ರಫಿಕ್ ಅಹ್ಮದ್ ಅವರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿವೆ ಎನ್ನುತ್ತಿದೆ ಮೂಲಗಳು.