ಜನಾರ್ದನ ರೆಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯಿಂದ ಟಿಕೆಟ್ ಸಿಗಲೇ ಇಲ್ಲ. ಹೀಗಾಗಿ ಕಡೆಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರು. ಗೆಲುವು ಸಾಧಿಸಿ, ಶಾಸಕರಾಗಿ ಆಯ್ಕೆಯಾದರು. ಆದರೆ ಇದೀಗ ಬಿಜೆಪಿಯಿಂದ ಮತ್ತೆ ಆಫರ್ ನೀಡಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ.
ಜನಾರ್ದನ ರೆಡ್ಡಿಗೆ ಬಿಜೆಪಿಗೆ ವಾಪಾಸ್ ಬರುವಂತೆ ಕರೆ ಮಾಡಲಾಗಿದೆ ಅಂತೆ. ಪ್ರಭಾವಿ ನಾಯಕರೊಬ್ಬರಿಂದ ಕರೆ ಬಂದಿದೆಯಂತೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದ್ದಂತೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಯಾಕಂದ್ರೆ ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟ ಮೇಲೆ ಸಾಕಷ್ಟು ಕಾರ್ಯಕರ್ತರು ಬಿಜೆಪಿ ತೊರೆದು ಜನಾರ್ದನ ರೆಡ್ಡಿ ಪಕ್ಷಕ್ಕೆ ಸೇರಿದ್ದರು. ಹೀಗಾಗಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಹೋದರೆ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜನಾರ್ದನ ರೆಡ್ಡಿ, ನಾನು ಸ್ವಂತ ಪಕ್ಷ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಪ್ರತ್ಯೇಕವಾಗಿ ನಾನು ಪಕ್ಷ ಕಟ್ಟಿರುವುದೇ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ. 2024ರ ಲೋಕಸಭೆ ಹಾಗೂ 2028ರ ವಿಧಾನಸಭಾ ಚುನಾವಣೆಯೇ ನಮ್ಮ ಮುಖ್ಯ ಟಾರ್ಗೆಟ್ ಎಂದು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ತಾವೂ ಎಲ್ಲಿಯೂ ಹೋಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿರುವಂತೆ ಜನಾರ್ದನ ರೆಡ್ಡಿ ಪಕ್ಷ ಕೂಡ ಟಾರ್ಗೆಟ್ ಮಾಡಿದೆ. ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, ಗೆಲುವು ಸಾಧಿಸುವಂತ ತಯಾರಿ ನಡೆಸಿಕೊಂಡಿದ್ದಾರೆ.