ತಕ್ಷಣವೇ ರೈಲಿನಲ್ಲಿ ಪ್ರಯಾಣಿಸಲು ಸೀಟ್ ಖಚಿತಪಡಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವೇ ತತ್ಕಾಲ್ ಟಿಕೆಟ್.ತುರ್ತು ಪ್ರಯಾಣಿಕರಿಗಾಗಿಯೇ ಇರುವ ವಿಶೇಷ ಬುಕಿಂಗ್ ವ್ಯವಸ್ಥೆ ತತ್ಕಾಲ್.ಆದರೆ, ತತ್ಕಾಲ್ ಟಿಕೆಟ್‌ಗಳ ಬಗ್ಗೆ ಅನೇಕರಿಗೆ ಗೊಂದಲಗಳಿವೆ.ಅದರಲ್ಲೂ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಹಣ ವಾಪಸ್ ಸಿಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ. ತತ್ಕಾಲ್ ಟಿಕೆಟ್ ರದ್ದುಪಡಿಸಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ಪ್ರಯಾಣದ ದಿನಕ್ಕೆ ಒಂದು ದಿನ ಮುಂಚಿತವಾಗಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಎಸಿ ಕ್ಲಾಸ್‌ಗಳಿಗೆ ಬೆಳಗ್ಗೆ 10 ಗಂಟೆಗೆ ಮತ್ತು ನಾನ್-ಎಸಿ ಕ್ಲಾಸ್‌ಗಳಿಗೆ ಬೆಳಗ್ಗೆ 11 ಗಂಟೆಗೆ ಬುಕಿಂಗ್ ಶುರುವಾಗುತ್ತದೆ. ನೀವು IRCTC ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ರೈಲ್ವೆ ನಿಲ್ದಾಣದ ಕೌಂಟರ್‌ನಲ್ಲಿಯೂ ಬುಕ್ ಮಾಡಬಹುದು.ತತ್ಕಾಲ್ ಟಿಕೆಟ್ ರದ್ದತಿ ನಿಯಮಗಳು ಸಾಮಾನ್ಯ ಟಿಕೆಟ್‌ಗಳಿಗಿಂತ ಹೆಚ್ಚು ಕಠಿಣ ಮತ್ತು ಸ್ವಲ್ಪ ಗೊಂದಲಮಯವಾಗಿವೆ.
ಕನ್ಫರ್ಮ್ ಆದ ತತ್ಕಾಲ್ ಟಿಕೆಟ್ ಅನ್ನು ನೀವು ರದ್ದುಗೊಳಿಸಿದರೆ ಯಾವುದೇ ಹಣ ವಾಪಸ್ ಸಿಗುವುದಿಲ್ಲ. ಅಂದರೆ, ನಿಮ್ಮ ಪ್ರಯಾಣದ ಯೋಜನೆ ಬದಲಾದರೆ, ನೀವು ರೈಲು ತಪ್ಪಿಸಿಕೊಂಡರೆ ಅಥವಾ ತಪ್ಪಾದ ದಿನಾಂಕಕ್ಕೆ ಬುಕ್ ಮಾಡಿದರೂ ಸಹ, ನೀವಾಗಿಯೇ ಟಿಕೆಟ್ ರದ್ದುಗೊಳಿಸಿದರೆ ಹಣ ಮರಳಿ ಬರುವುದಿಲ್ಲ.
ವೇಟಿಂಗ್ ಲಿಸ್ಟ್‌ನಲ್ಲಿರುವ ತತ್ಕಾಲ್ ಟಿಕೆಟ್ ಅನ್ನು ನೀವು ರದ್ದುಗೊಳಿಸಬಹುದು. ಸಾಮಾನ್ಯ ವೇಟಿಂಗ್ ಲಿಸ್ಟ್ ಟಿಕೆಟ್‌ನಂತೆಯೇ ನಿಗದಿತ ರದ್ದತಿ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ. ಒಂದು ವೇಳೆ, ಚಾರ್ಟ್ ಸಿದ್ಧವಾದ ನಂತರವೂ ನಿಮ್ಮ ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲೇ ಉಳಿದರೆ, IRCTC ಅದನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುತ್ತದೆ ಮತ್ತು ಪೂರ್ತಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತದೆ.



