ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯೇ ಹೈಲೇಟ್ ಆಗಿತ್ತು. ಚಿನಾವಣೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧೆ ಜೋರಾಗಿತ್ತು. ಕುಮಾರಸ್ವಾಮಿ ವರ್ಸಸ್ ಸುಮಲತಾ ನಡುವೆ ಚುನಾವಣಾ ಯುದ್ಧ ನಡೆದಿತ್ತು. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದರು. ಆಗ ದರ್ಶನ್ ಹಾಗೂ ಯಶ್ ದೊಡ್ಡ ಶಕ್ತಿಯಾಗಿ ನಿಂತಿದ್ದರು. ಈ ಬಾರಿಯೂ ಸುಮಲತಾ ಅವರು ಚುನಾವಣೆಗೆ ನಿಲ್ಲುವುದು ಪಕ್ಕಾ ಆಗಿದೆ. ಹೀಗಾಗಿ ಯಶ್ ಹಾಗೂ ದರ್ಶನ್ ಬೆಂಬಲವಾಗಿ ನಿಲ್ಲುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಇದಕ್ಕೆ ಸುಮಲತಾ ಅವರೇ ಉತ್ತರ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಸುಮಲತಾ ಅವರು, ಕಳೆದ ಬಾರಿ ನಾನು ಇಂಡಿಪೆಂಡೆಂಟ್ ಆಗಿ ನಿಂತಿದ್ದೆ. ಯಾವುದೇ ಅನುಭವ ಇಲ್ಲದೆ ಚುನಾವಣೆಗೆ ಹೋಗಿದ್ದೆ. ನಾನು ಅಂದು ಯಾರನ್ನೂ ಕರೆದಿರಲಿಲ್ಲ. ಆದರೆ ದರ್ಶನ್ ಹಾಗೂ ಯಶ್ ನನ್ನ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಆದರೆ ಇಂದಿನ ಸಂದರ್ಭವೇ ಬೇರೆ. ನಾನು ಒಂದು ಪಕ್ಷದಿಂದ ನಿಲ್ಲುತ್ತಿದ್ದೇನೆ. ಪಕ್ಷದ ಲೀಡರ್ಸ್ ಏನು ಹೇಳುತ್ತಾರೋ ನೋಡಬೇಕಿದೆ. ಈ ಬಾರಿಯ ಚುನಾವಣೆ ಕೂಡ ಬೇರೆ ರೀತಿಯಾಗಿಯೇ ಇರುತ್ತದೆ. ಪ್ರಚಾರ, ಕ್ಯಾಂಪೇನ್ ಎಲ್ಲವೂ ವಿಭಿನ್ನವಾಗಿರುತ್ತದೆ.
ನಟ ದರ್ಶನ್ ಮತ್ತು ಯಶ್ ದೊಡ್ಡ ಶಕ್ತಿ. ಬರುವುದಾದರೆ ಬರಲಿ. ಯಶ್ ಪ್ಯಾನ್ ಇಂಡಿಯಾ ಸ್ಟಾರ್, ದರ್ಶನ್ ಸೌತ್ ಇಂಡಿಯಾದಲ್ಲು ಬ್ಯುಸಿ ಇರುವ ನಟ. ಕಳೆದ ಬಾರಿ 25 ದಿನ ಬಂದು ಪ್ರಚಾರ ಮಾಡಿದ್ದರು. ಅವರಿಗಾಗಿ ಎಷ್ಟೋ ಮಂದಿ ಕಾಯುತ್ತಾರೆ. ಒಂದು ಸಿನಿಮಾದ ಮೇಲೆ ಎಷ್ಟೋ ಮಂದಿಯ ಜೀವನ ನಡೆಯುತ್ತದೆ. ಕ್ಯಾಂಪೇನ್ ಬನ್ನಿ ಅಂತ ಯಾರನ್ನು ಕರೆಯುವುದಕ್ಕೆ ಆಗಲ್ಲ. ಅವರೇ ಬರುವುದಾದರೆ ಖಂಡಿತ ಸ್ವಾಗತ ಎಂದಿದ್ದಾರೆ.