ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ. ಫೆಬ್ರವರಿ.09 : ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಶುಕ್ರವಾರ ಕರೆ ನೀಡಿದ ಬಂದ್ ಗೆ ಚಳ್ಳಕೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗಡಿಗಳು ಬಾಗಿಲು ಮುಚ್ಚಿದ್ದು, ಜನಸಂಚಾರ ವಿರಳವಾಗಿದೆ. ನಗರದಲ್ಲಿ ಹೂವು, ಹಣ್ಣು, ಸೊಪ್ಪು, ತರಕಾರಿ ಮಾರಾಟ ಹೊರತುಪಡಿಸಿ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿವೆ. ಬಸ್, ಆಟೊ ಸಂಚಾರ ಸ್ಥಗಿತಗೊಂಡಿದೆ. ಬೈಕ್, ಕಾರು ಹಾಗೂ ಸರಕು ಸಾಗಣೆ ವಾಹನ ಸಂಚಾರಕ್ಕೂ ಪ್ರತಿಭಟನಕಾರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.ನಗರದ ನೆಹರೂ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬಕ್ಕೆ ಕಿಡಿಕಾರಿದರು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ₹ 5,300 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆ, ಕಾರ್ಮಿಕ, ಹೋಟೆಲ್ ಮಾಲೀಕರು, ಆಟೋ, ಖಾಸಗಿ ಬಸ್, ಲಾರಿ ಮಾಲಿಕರ, ಹಾಗೂ ಚಾಲಕರ ಸಂಘಟನೆಗಳು ಬಂದ್‌ಗೆ ಸಾಥ್ ನೀಡಿವೆ.
ನಗರದ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಿಂಗಾರೆಡ್ಡಿ, ಸದಸ್ಯರಾದ ಯಾದವ್ ರೆಡ್ಡಿ, ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ. ರೈತ ಮುಖಂಡರಾದ ಕೆಪಿ ಬೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಸಿವೈ ಶಿವರುದ್ರಪ್ಪ, ತಿಪ್ಪೇಸ್ವಾಮಿ, ರಂಗಸ್ವಾಮಿ, ಚಿಕ್ಕಣ್ಣ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಪ್ರಸನ್ನ ಕುಮಾರ್, ನೇತಾಜಿ, ಪ್ರಸನ್ನ, ಪ್ರಸನ್ನ, ಶರೀಫ್ ಖಾನ್, ಎಚ್ಎಸ್ ಸೈಯದ್, ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ರೈತರು ಇದ್ದರು.