ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ನಿನ್ನೆ ಗಣಿತ ಪರೀಕ್ಷೆ ನಡೆದಿದೆ. ಆದ್ರೆ ಶಾಕಿಂಗ್ ಅಂದ್ರೆ ಕರ್ನಾಟಕದಾದ್ಯಂತ ಸುಮಾರು, 12,533 ವಿದ್ಯಾರ್ಥಿಗಳು ಗಣಿತ ಪರೀಕ್ಷೆಗೆ ಗೈರಾಗಿದ್ದಾರೆ. ಇನ್ನು ಯಾವೆಲ್ಲಾ ಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಗೈರಾಗಿದ್ದಾರೆ ಎಂಬುದನ್ನು ನೋಡುವುದಾದರೆ ಬೆಂಗಳೂರು ದಕ್ಷಿಣ ಭಾಗದಿಂದಾನೇ ಅತೀ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಹಾಗೇ ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಹಾಸನ ಭಾಗದಲ್ಲಿ ಪರೀಕ್ಷೆಗೆ ಹೋಗದೆ ವಿದ್ಯಾರ್ಥಿಗಳು ಸುಮ್ಮನೆ ಆಗಿದ್ದಾರೆ. ವಿದ್ಯಾರ್ಥಿಗಳ ಜೀವನದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾದ ಘಟ್ಟವಾಗಿದೆ. ಈ ಪರೀಕ್ಷೆ ಪಾಸ್ ಮಾಡಿದರೆ ಮುಂದಿನ ಶೈಕ್ಷಣಿಕ ಬೆಳವಣಿಗೆ ಸುಲಭ. ಹೀಗಿರುವಾಗ ಪರೀಕ್ಷೆಗೆ ಇಷ್ಟೊಂದು ಮಕ್ಕಳು ಗೈರಾಗಿರುವುದು ಶಾಕಿಂಗ್ ಎನಿಸಿದೆ.

ಇನ್ನು ಈ ಸಂಬಂಧ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಈ ಪರೀಕ್ಷೆಗೆ ಹಾಜರಾಗದೆ ಇರುವವರಿಗೆ ಮತ್ತೊಂದು ಪರೀಕ್ಷೆಯ ಅವಕಾಶ ಇದ್ದೆ ಇದೆ. ಆದರೆ ಈಗಿನ ವಿದ್ಯಾರ್ಥಿಗಳಿಗೆ ಆ ಅವಕಾಶ ಮೂರು ಬಾರಿ ಇದೆ. ಅಂದ್ರೆ ಈ ಪರೀಕ್ಷೆಗೆ ಹಾಜರಾಗದೆ ಇದ್ದಲ್ಲಿ, ಫೇಲ್ ಆದಲ್ಲಿ ಮೂರು ಬಾರಿ ಪ್ರಯತ್ನ ಮಾಡಬಹುದಾಗಿದೆ. ಹೀಗಾಗಿ ಪರೀಕ್ಷೆಗೆ ಗೈರಾಗಿರುವವರ ಸಂಖ್ಯೆ ಜಾಸ್ತಿಯಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯ ಬಗ್ಗೆ ಆತ್ಮವಿಶ್ವಾಸ ಹೊಂದಿಲ್ಲದೆ ಇದ್ದರೆ ಈ ರೀತಿ ಹಿಂದೇಟು ಹಾಕುತ್ತಾರೆ. ಇನ್ನು ಎರಡು ಪರೀಕ್ಷೆಗಳಿಗೆ ಹಾಜರಾಗಬಹುದು ಎಂಬ ಮನೋಭಾವದಿಂದಾನೂ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರಬಹುದು ಎಂದು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿಗಳನ್ನೇ ಕೇಳಿದಾಗ ಈ ಬಾರಿಯ ಗಣಿತ ಪತ್ರಿಕೆ ಕಷ್ಟಕರವಾಗಿತ್ತು ಎಂಬ ಅಭಿಪ್ರಾಯ ತಿಳಿಸಿದ್ದಾರೆ.


