ಬೆಂಗಳೂರು: ನಟ ಉಪೇಂದ್ರ ಗಾದೆ ಹೇಳುವ ಮೂಲಕ ಒಂದು ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ಚನ್ನಮ್ಮ ಅಚ್ಚುಕಟ್ಟೆ ಹಾಗೂ ಹಕಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಈ ಕೇಸ್ ಸಂಬಂಧ ಹೈಕೋರ್ಟ್ ನಿಂದ ಸ್ಟೇ ತರಲಾಗಿದೆ. ಬಿಗ್ ರಿಲೀಫ್ ಸಿಕ್ಕಿದೆ ಎಂದು ಸಂತಸ ಪಡುವಾಗಲೇ ಈಗ ಮತ್ತೆ ಬಂಧನಕ್ಕೆ ಒತ್ತಾಯ ಕೇಳಿ ಬಂದಿದೆ.
ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಭೈರಪ್ಪ ಹರೀಶ್ ಬಂಧನಕ್ಕೆ ಒತ್ತಡ ಹಾಕಿದ್ದಾರೆ. ನಾನು ದೂರು ನೀಡಿ 48 ಗಂಟೆಯಾದರೂ ಇನ್ನೂ ಯಾಕೆ ಬಂಧಿಸಿಲ್ಲ. ನಾನು ಆಗಸ್ಟ್ 13ರ ಸಂಜೆ ದೂರು ನೀಡಿರುವುದು. ಸದ್ಯ ಅವರು ಸ್ಟೇ ತಂದಿರುವುದು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ. ನಾನು ನೀಡಿರುವ ದೂರಿಗೆ ಯಾವುದೇ ಸ್ಟೇ ತಂದಿಲ್ಲ ಎಂದು ಆಕ್ರೋಶ ಹೊರ ಹಾಕಿದ ಭೈರಪ್ಪ ಹರೀಶ್, ಹಲಸೂರು ಗೇಟ್ ಠಾಣೆಯ ಎಸಿಪಿಯನ್ನು ಭೇಟಿ ಮಾಡಿ ಕೂಡಲೇ, ಅವರ ಹೇಳಿಕೆ ಸಂಬಂಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಟ ಉಪೇಂದ್ರ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುವಾಗ ಗಾದೆ ಮಾತೊಂದನ್ನು ಬಳಕೆ ಮಾಡಿದ್ದರು. ಬಳಿಕ ಈ ಸಂಬಂಧ ಕ್ಷಮೆಯನ್ನು ಕೇಳಿದ್ದರು. ಇದೇ ವಿಚಾರವಾಗಿ ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಕೂಡ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.