ಬೆಂಗಳೂರು: ಇತ್ತಿಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕ್ರಿಕೆಟ್ ಪಂದ್ಯ ನೋಡುವುದಕ್ಕೆ ಸ್ಟೇಡಿಯಂಗೆ ಹೋಗಿದ್ದರು. ಆದರೆ ಈ ವಿಚಾರವನ್ನು ಮುಂದಿಟ್ಟುಕೊಂಡು, ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಇದೀಗ ಆ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಅವರು ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ನಾವೂ ಹೋಗಿದ್ದು ಕ್ರೀಡೆಯನ್ನು ಬೆಂಬಲಿಸುವುದಕ್ಕೆ ವಿನಃ, ಬೇರೆ ಯಾವ ಉದ್ದೇಶಕ್ಕೂ ಅಲ್ಲ. ಮುಖ್ಯಮಂತ್ರಿಯಾಗಿದ್ದಾಗ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಇದ್ದರಲ್ಲ ಅದು ಯಾಕೆ..? ಕೇಳಿದ್ದರೆ ಕಾವೇರಿ ನಿವಾಸವನ್ನು ಬಿಟ್ಟು ಕೊಡುತ್ತಿದ್ದೆ ಎಂದಿದ್ದಾರೆ. ಬಿ ಎಸ್ ಯಡಿಯೂರಪ್ಪ ಅವರು ಕಾವೇರಿ ನಿವಾಸದಲ್ಲಿ ಕೊನೆಯ ತನಕ ವಾಸವಿದ್ದರು. ಜಾರ್ಜ್ ಅವರಿಗೆ ಹಂಚಿಕೆಯಾಗಿದ್ದ ನಿವಾಸದಲ್ಲಿ ನಾನು ವಾಸವಿದ್ದೆ. ನಾನು ವಾಸವಿದ್ದ ವಸತಿಗೃಹ ಮೀಸಲಾದ ವಸತಿಗೃಹವಾಗಿರಲಿಲ್ಲ. ಯಾರೂ ಬೇಕಾದರೂ ವಾಸವಿರಬಹುದಿತ್ತು ಎಂದು ವಸತಿಗೃಹ ಹಿಂತಿರುಗಿಸಿರಲಿಲ್ಲ ಎಂಬ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದಾರೆ.
ಇನ್ನು ಇದೇ ವೇಳೆ ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಕುಣಿಯದವರು ನೆಲ ಡೊಂಕು ಎಂದರಂತೆ. ತಮಗೆ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ, ಬೇರೆಯವರ ಮೇಲೆ ಆರೋಪಿಸುವುದು ನಿರರ್ಥಕ ಎಂದಿದ್ದಾರೆ.