ಗದಗ: ಸಿಎಂ ಆಗಬೇಕೆಂಬ ಕನಸು ಯಾರಿಗಿರಲ್ಲ ಹೇಳಿ. ಹಂಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೂ ಇದೆ. ಆ ಆಸೆ ಆಗಾಗ ಹೊರಗೆ ಬರುತ್ತಾ ಇರುತ್ತದೆ. ಇದೀಗ ಇಂದು ಮತ್ತೆ ಸಿಎಂ ಆಗುವ ಆಸೆಯನ್ನು ಹೊರ ಹಾಕಿದ್ದಾರೆ. ನಾನೇನು ಅಯೋಗ್ಯನಾ..? ನಾನೇಕೆ ಸಿಎಂ ಆಗಬಾರದು ಎಂದು ಕೇಳಿದ್ದಾರೆ.
ಗದಗ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ಮಾಡಿ, ಮಾತನಾಡಿದ ಯತ್ನಾಳ್, ನನಗೇನು ಸಿಎಂ ಆಗುವ ಶಕ್ತಿ ಇಲ್ಲವಾ..? ನಾನು ಸಿಎಂ ಆಗುವುದಕ್ಕೆ ಬಯೋಡೇಟಾ ಹಿಡಿದು ಓಡಾಡಲ್ಲ. ನಂಗೆ ಅವಕಾಶಕೊಟ್ಟರೆ ಯೋಗಿ ರೀತಿಯ ಆಡಳಿತ ಇರುತ್ತದೆ. ಇಷ್ಟು ದಿನ ನನ್ನನ್ನು ಪಂಜರದಲ್ಲಿಟ್ಟಿದ್ರು. ಈಗ ಪ್ರಧಾನಿ ಮೋದಿ, ಅಮಿತ್ ಶಾಬಂದ ಮೇಲೆ ಅವರ ಆಶೀರ್ವಾದದಿಂದ ಹೊರಗೆ ಬಂದಿದ್ದೇನೆ ಎಂದಿದ್ದಾರೆ.
ಇನ್ನು ಮುಂದುವರೆದು ತನ್ನ ಜನಪ್ರಿಯತೆ ಬಗ್ಗೆ ಮಾತನಾಡಿರುವ ಯತ್ನಾಳ್, ನಾನೇನು ಮಂತ್ರಿಯಲ್ಲ. ಆದರೂ ನನಗೋಸ್ಕರ 10-15 ಸಾವಿರ ಜನ ಸೇರುತ್ತಾರೆ. ಜನರ ಆಶೀರ್ವಾದ ನನಗೆ ಬೇಕು. ಹಾಗಂತ ನಾನೇನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಮುಖ್ಯಮಂತ್ರಿ ಆಗೋದು ಇಲ್ಲ ಎಂದಿದ್ದಾರೆ.