ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಫೆ.22): ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸ್ಥಾನಗಳಿಗೆ ಇದೇ ಫೆಬ್ರವರಿ 25ರಂದು ಉಪ ಚುನಾವಣೆ ನಡೆಯಲಿದ್ದು, ಚುನಾವಣೆ ನಿಮಿತ್ತ ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ಸಂತೆ, ಜಾತ್ರೆ ಮತ್ತು ಉತ್ಸವ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.
ಚುನಾವಣಾ ವೇಳಾಪಟ್ಟಿ ಅನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 5 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದ್ದು, ಈ ಪೈಕಿ ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಮತ್ತು ಹೊಳಲ್ಕೆರೆ ತಾಲ್ಲೂಕಿನ ಹಿರೇಎಮ್ಮಿಗನೂರು ಗ್ರಾಮ ಪಂಚಾಯಿತಿ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ 1 ಸದಸ್ಯ ಸ್ಥಾನ, ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಗ್ರಾಮ ಪಂಚಾಯಿತಿಯಲ್ಲಿ 1 ಸದಸ್ಯ ಸ್ಥಾನ ಹಾಗೂ ಜಂಪಣ್ಣ ನಾಯಕನಕೋಟೆ ಗ್ರಾಮ ಪಂಚಾಯಿತಿಯಲ್ಲಿ 1 ಸದಸ್ಯ ಸ್ಥಾನ ಸೇರಿದಂತೆ ಒಟ್ಟು 3 ಸದಸ್ಯ ಸ್ಥಾನಗಳಿಗೆ ಫೆ.25ರಂದು ಮತದಾನ ನಡೆಯಲಿದೆ.
ಚುನಾವಣೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಆಯಾ ಗ್ರಾಮ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಬಗೆಯ ಸಂತೆ, ಜಾತ್ರೆ, ಉತ್ಸವ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ ಹೊರಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯು ಫೆ.25ರಂದು ನಡೆಯಲಿದ್ದು, ಚುನಾವಣೆಯು ಮುಕ್ತ ಶಾಂತಿಯುತ, ನಿಷ್ಪಕ್ಷಪಾತ ಹಾಗೂ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಫೆ.23ರ ಬೆಳಿಗ್ಗೆ 5 ಗಂಟೆಯಿಂದ ಫೆ.25ರ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಬರುವ ಎಲ್ಲಾ ಬಗೆಯ ಮದ್ಯದ ಅಂಗಡಿ ಮುಚ್ಚಲು ಹಾಗೂ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿ ಗ್ರಾಮ ಪಂಚಾಯಿತಯಲ್ಲಿ 1 ಸದಸ್ಯ ಸ್ಥಾನ, ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಗ್ರಾಮ ಪಂಚಾಯಿತಿಯಲ್ಲಿ 1 ಸದಸ್ಯ ಸ್ಥಾನ ಹಾಗೂ ಜಂಪಣ್ಣ ನಾಯಕನಕೋಟೆ ಗ್ರಾಮ ಪಂಚಾಯಿತಿಯಲ್ಲಿ 1 ಸದಸ್ಯ ಸ್ಥಾನ ಸೇರಿದಂತೆ ಒಟ್ಟು 3 ಸದಸ್ಯ ಸ್ಥಾನಗಳಿಗೆ ಫೆ.25ರಂದು ಮತದಾನ ನಡೆಯಲಿದೆ.
ಮತದಾನವು ಮುಕ್ತಾಯವಾಗುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಬೋಗದಾರರು ಮತ್ತು ಸಂದರ್ಭಾನುಸಾರ ವ್ಯವವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ ಹೊರಡಿಸಿದ್ದಾರೆ.