ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಆ.06) : ಕಲುಷಿತ ನೀರು ಸೇವಿಸಿ ಮೃತಪಟ್ಟ ಐದು ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿ ಪ್ರಕರಣವನ್ನು ಮುಚ್ಚಿ ಹಾಕಿದರೆ ದೊಡ್ಡ ಹೋರಾಟ ನಡೆಸಲಾಗುವುದೆಂದು ಸಾಮಾಜಿಕ ಹೋರಾಟಗಾರ ಚಿತ್ರನಟ ಚೇತನ್ ಅಹಿಂಸ ಎಚ್ಚರಿಸಿದರು.
ಕವಾಡಿಗರಹಟ್ಟಿಗೆ ಭಾನುವಾರ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್ ಅಹಿಂಸ ಇದೊಂದು ನೋವು, ದುಃಖದ ಸಂಗತಿ. ಇನ್ನೂರಕ್ಕೂ ಹೆಚ್ಚು ಮಂದಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇದಕ್ಕೆ ಜಿಲ್ಲಾಡಳಿತ, ನಗರಸಭೆ ವೈಫಲ್ಯವಿದೆ.
ಶೋಷಿತ ಸಮುದಾಯಕ್ಕೆ ಸೇರಿದ ಮಾದಿಗ ಜನಾಂಗದವರಿಗೆ ಏಕೆ ಈ ರೀತಿ ಆಗಿದೆ ಎನ್ನುವುದು ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ದಲಿತರು ಬಡವರೆಂದು ಸರ್ಕಾರ ನಿರ್ಲಕ್ಷಿಸಬಾರದು. ಚುನಾವಣೆಯಲ್ಲಿ ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಳ್ಳುವುದು ಆಳುವ ಪಕ್ಷಗಳಿಗೆ ಶೋಭೆಯಲ್ಲಿ. ದಲಿತರ ಹಣ ಹನ್ನೆರಡು ಸಾವಿರ ಕೋಟಿ ರೂ.ಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಉಚಿತ ಗ್ಯಾರೆಂಟಿಗಳಿಗೆ ಬಳಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಪೂರೈಕೆಯಾಗಬೇಕು. ಕವಾಡಿಗರಹಟ್ಟಿ ಎ.ಕೆ.ಕಾಲೋನಿಯಲ್ಲಿರುವ ದಲಿತರಿಗೆ ಮಾತ್ರ ಕಾಲರ ರೋಗ ತಗುಲಿದೆಯಾ? ಹಾಗಿದ್ದ ಮೇಲೆ ಮುನ್ನೆಚ್ಚರಿಕೆ ಕೈಗೊಂಡು ನೀರಿನ ಟ್ಯಾಂಕ್‍ಗಳನ್ನು ಏಕೆ ಶುಚಿಗೊಳಿಸಲಿಲ್ಲ. ಈ ಗ್ರಾಮದಲ್ಲಿ ಅಂತರ್‍ಜಾತಿ ವಿವಾಹವಾಗಿರುವುದು ಪ್ರಕರಣಕ್ಕೆ ತಳಕು ಹಾಕಿಕೊಂಡಿದೆಯೇ ಎನ್ನುವುದನ್ನು ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಒಬ್ಬರ ಮೇಲೆ ತಪ್ಪು ಹಾಕುವುದಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರೆಂಟಿಗಳಿಗೆ ಜನರ ದುಡ್ಡು ಬೇಕ ಎಂದು ಚೇತನ್ ಅಹಿಂಸ ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಚೇತನ್ ಅಹಿಂಸ ವೀಕ್ಷಿಸಿ ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಯಣ್ಣ ಕೆಂಗುಂಟೆ, ನವೀನ್ ಮದ್ದೇರು, ಚಂದ್ರಮೂರ್ತಿ, ಮಂಜಣ್ಣ, ಕಸ್ತೂರಪ್ಪ, ಕರಿಯಪ್ಪ, ಶ್ರೀನಿವಾಸ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.