ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯನ್ನ ಜಾರಿ ಮಾಡಿರುವುದರಿಂದ ವಿರೋಧ ಪಕ್ಷಗಳು ಇದಕ್ಕೆ ವಿರೋಧಿಸಿವೆ. ಈ ಸಂಬಂಧ ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿತ್ತು. ಆದ್ರೆ ಕಾಂಗ್ರೆಸ್ ಅದ್ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಅನೇಕ ಹೆಣ್ಣು ಮಕ್ಕಳನ್ನ ಮತಾಂತರ ಮಾಡಿ, ವಿದೇಶಕ್ಕೆ ಮಾರಾಟ ಮಾಡ್ತಾರೆ. ಅವರನ್ನ ದುರ್ಬಳಕೆ ಮಾಡಿಕೊಂಡು ಕೈಕೊಟ್ಟಿದ್ದಾರೆ. ಈ ಕಾಯ್ದೆ ಜಾರಿಗೆ ತಂದ ಉದ್ದೇಶವೇ ಯಾರನ್ನು ಬಲವಂತವಾಗಿ ಮತಾಂತರ ಮಾಡಬಾರದು ಎಂಬುದಾಗಿದೆ.
ಒಂದು ವೇಳೆ ಮತಾಂತರವಾಗಬೇಕು ಅಂದ್ರೆ ಕಾನೂನಜ ರೀತಿಯಾಗಲಿ. ಕಾನೂನಿನ ಮೂಲಕ ಮತಾಂತರವಾಗುವ ಅವಕಾಶವಿದೆ. ಕದ್ದು ಮುಚ್ಚಿ ಮತಾಂತರವಾಗಬಾರದು. ಆಸೆ, ಆಮಿಷಗಳಿಗೆ ಮತಾಂತರವಾಗಲು ಬಿಡುವುದಿಲ್ಲ. ಕೈಯಿಲ್ಲ, ಕಾಲಿಲ್ಲ, ಮತಾಂತರವಾದರೆ ಕೈ, ಕಾಲು ಬರುತ್ತೆ ಅಂತ ಮತಾಂತರವಾಗಬಾರದು.
ಡಿಕೆ ಶಿವಕುಮಾರ್ ಗೆ ಮತಾಂತರದ ಬಗ್ಗೆ ನಿಜಕ್ಕೂ ಗೊತ್ತಿಲ್ಲ. ಡಿಕೆಶಿ ಬರ್ತೀನಿ ಅಂದ್ರೆ ಅಂತಹ ಹೆಣ್ಣು ಮಕ್ಕಳನ್ನ ವೈಯಕ್ತಿಕವಾಗಿ ಭೇಟಿ ಮಾಡಿಸ್ತೀನಿ.ಕಾಯ್ದೆ ವಿರೋಧಿಸಿ ನಿನ್ನೆ ಸಭಾತ್ಯಾಗ ಮಾಡಿದ್ದಾರೆ. ಅದನ್ನ ಕರ್ನಾಟಕದ ಜನ ನೋಡಿದ್ದಾರೆ. ಆದ್ರೆ ಅವರು ಮತಾಂತರ ಕಾಯ್ದೆಯನ್ನ ಅದ್ಯಾಕೆ ವಿರೋಧಿಸ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.