ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ಈಗ ಹನಿಟ್ರ್ಯಾಪ್ ಸುದ್ದಿ ಜೋರಾಗಿದೆ. ಅದರಲ್ಲೂ ತುಮಕೂರಿನ ಸಚಿವರ ಹೆಸರು ಇದರಲ್ಲಿ ಓಡಾಡ್ತಾ ಇದೆ. ವಿಧಾನಸಭೆಯಲ್ಲೂ ಬಿಸಿಬಿಸಿ ಚರ್ಚೆಯಾಗುತ್ತಾ ಇದೆ. ಇದರ ನಡುವೆ ಶಾಸಕ ಮುನಿರತ್ನ ಕೂಡ ಮಾತನಾಡಿದ್ದು, ಆಕ್ರೋಶ ಹೊರ ಹಾಕಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್ ಮೇಲೆ ಹರಿಹಾಯ್ದಿದ್ದಾರೆ.

ನನಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಅನ್ಯಾಯವಾಗಿದೆ. ನನ್ನ ವಿರುದ್ಧ ಅ*ಚಾರದ ಕೇಸ್ ಹಾಕಿಸಿದ್ದಾರೆ. ನೀನು ರಾಜೀನಾಮೆ ಕೊಟ್ಟರೆ ಜಾತಿ ನಿಂದನೆ ಕೇಸ್ ವಾಪಾಸ್ ಪಡೆಯುತ್ತೇನೆ ಎಂದು ಹೇಳಿದ್ದರು. ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹೆಚ್.ಡಿ.ರೇವಣ್ಣ ವಿರುದ್ಧವೂ ಇದೇ ಕುತಂತ್ರ ಮಾಡಿದರು. ಈಗ ಸಚಿವ ರಾಜಣ್ಣ ಅವರ ಮೇಲೆ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಒಂದು ಕಿವಿ ಮಾತು ಹೇಳುತ್ತೇನೆ. ನಿಮ್ಮ ಹನಿಟ್ರ್ಯಾಪ್ ಟೀಂ ನನಗೆ ಗೊತ್ತಿದೆ. ನೀವೂ ರಾತ್ರಿ ಮೀಟಿಂಗ್ ಮಾಡಿದ್ದು ನನಗೆ ಗೊತ್ತಿದೆ. ಡಿಕೆ ಶಿವಕುಮಾರ್ ಅವರಿಗೆ ಈ ಮಹಾಪಾಪದ ಕೆಲಸ ಯಾಕೆ ಬೇಕು..? ನನಗೆ ಆಗಿರುವ ನೋವನ್ನು ನಾನು ಹೇಳಿದ್ದೇನೆ. ಸಿಸಿಟಿವಿ, ಆಡಿಯೋ ಎಲ್ಲಾ ಸಾಕ್ಷಿಗಳು ಇದಾವೆ. ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್ ನಲ್ಲಿಯೇ ಇದ್ದದ್ದು. ರಾಜಣ್ಣ ಸಹ ಕಾಂಗ್ರೆಸ್ ನಲ್ಲಿಯೇ ಇರೋದು. ಇದು ಒಳ್ಳೆಯದಲ್ಲ ಎಂದು ಶಾಸಕ ಮುನಿರತ್ನ ಎಚ್ಚರಿಕೆ ನೀಡಿದ್ದಾರೆ. ಇನ್ನು ಇದೇ ವಿಚಾರವಾಗಿ ಸಚಿವ ಕೆ.ಎನ್.ರಾಜಣ್ಣ ಸದನದಲ್ಲಿ ಮಾತನಾಡುತ್ತಾ, ಇಬ್ಬರಲ್ಲ 48 ನಾಯಕರ ಹನಿಟ್ರ್ಯಾಪ್ ಆಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಗದ್ದಲ ಎಬ್ಬಿಸಿರೋ ಹನಿಟ್ರ್ಯಾಪ್ ವಿಚಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

