ವಿಶೇಷ ಲೇಖನ : ಡಾ. ಸಂತೋಷ್, ಚಿತ್ರದುರ್ಗ ಮೊಬೈಲ್ ಸಂಖ್ಯೆ : 9342466936
ಸುದ್ದಿಒನ್ : ವಸಡಿನಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯವಾಗಿ ಕಂಡುಬರುವ ಒಂದು ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಸಣ್ಣ ವಯಸ್ಸಿನಿಂದ ಮಧ್ಯ ವಯಸ್ಸಿನವರೆಗೂ ಈ ಸಮಸ್ಯೆಯು ಕಂಡುಬರುತ್ತದೆ. ಇದಕ್ಕೆ ಹತ್ತಾರು ಕಾರಣಗಳಿದ್ದರೂ ಪ್ರಮುಖವಾಗಿ ಬಾಯಿ ಸ್ವಚ್ಛತೆಯ ಕೊರತೆ ಹಾಗೂ ನಿರ್ವಹಣೆಯೇ ಪ್ರಮುಖವಾದ ಕಾರಣವಾಗಿದೆ. ಹಲ್ಲಿನ ಸರಿಯಾದ ಸ್ವಚ್ಛತೆ ಹಾಗೂ ನಿರ್ವಹಣೆಯಿಂದ ವಸಡಿನ ರಕ್ತಸ್ರಾವವನ್ನು ತಡೆಯಬಹುದಾಗಿದೆ.
ವಸಡು ರೋಗದ ಪ್ರಮುಖ ಹಾಗೂ ಪ್ರಾರಂಭದ ಲಕ್ಷಣವೇ ವಸಡಿನಲ್ಲಿ ರಕ್ತಸ್ರಾವ. ಪ್ರಾರಂಭದ ಹಂತದಲ್ಲೇ ಇದನ್ನು ಗುಣಪಡಿಸಬಹುದಾಗಿದೆ. ಕೆಲವು ಬಾರಿ ಒಂದೆರಡು ಬಾರಿ ರಕ್ತಸ್ರಾವ ಆಗಬಹುದು ಅಥವಾ ಪದೇ ಪದೇ ರಕ್ತಸ್ರಾವ ಆಗಬಹುದು. ವ್ಯಕ್ತಿಯ ನಿರ್ಲಕ್ಷ್ಯತನದಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
ಬಹಳಷ್ಟು ಜನರಿಗೆ ಬ್ರಷ್ ಮಾಡುವಾಗ ವಸಡಿನಲ್ಲಿ ರಕ್ತಸ್ರಾವವಾಗುವುದು, ಬಾಯಿ ಮುಕ್ಕಳಿಸಿ ಉಗಿದಾಗ ರಕ್ತ ಕಂಡುಬರುವುದು. ಗಮನಕ್ಕೆ ಬಂದರೂ ಕೆಲವು ಬಾರಿ ನಿರ್ಲಕ್ಷಿಸುತ್ತಾರೆ. ಆದರೆ ಒಂದು ಸಣ್ಣ ನಿರ್ಲಕ್ಷ್ಯತನದಿಂದ ಹಲ್ಲುಗಳ ಆಧಾರವೇ ಕುಸಿಯಬಹುದು.ಜೊತೆಗೆ ವಸಡು ರೋಗದಿಂದ ಇನ್ನಿತರ ದೈಹಿಕ ಸಮಸ್ಯೆ ಕಂಡು ಬರಬಹುದು.
ವಸಡಿನ ರಚನೆ ಹಾಗೂ ರಕ್ತಸ್ರಾವ:
ಹಲ್ಲನ್ನು ವಸಡು (ಇಗುಡು) ಕಾಲರ್ ರೀತಿಯಲ್ಲಿ ಸುತ್ತುವರೆದಿದ್ದು ಇದರ ರಕ್ಷಣೆ ಹಲ್ಲಿಗೆ ಮಹತ್ವಪೂರ್ಣವಾಗಿರುತ್ತದೆ.
ದವಡೆ ಮೂಳೆಯ ಮೇಲು ಹೊದಿಕೆ ಇದಾಗಿದ್ದು ಹಲ್ಲು ಮತ್ತು ಅದರ ಬೇರನ್ನು ಬಲವಾಗಿ,ಸುರಕ್ಷಿತವಾಗಿ ಹಿಡಿದುಕೊಳ್ಳುವ ಅಡಿಪಾಯವಾಗಿರುತ್ತದೆ.
ಒಂದು ಕಟ್ಟಡಕ್ಕೆ ಅದರ ಭದ್ರಬುನಾದಿ ಹಿಡಿದುಕೊಳ್ಳುವಂತೆ ಹಲ್ಲನ್ನು ಹಿಡಿದುಕೊಳ್ಳುವುದೇ ಈ ವಸಡು ಮತ್ತು ಅದರಡಿಯ ಮೂಳೆ.
ಪ್ರತಿ ಬಾರಿ ಆಹಾರ ಸೇವಿಸುವಾಗ,ಊಟ ಮಾಡುವಾಗ ಅದರ ಜಗೆಯುವ ಭಾಗವು ಹಲ್ಲಿನದ್ದಾಗಿದ್ದರೆ, ಅದರ ಒತ್ತಡವನ್ನು ಸಂಪೂರ್ಣವಾಗಿ ಈ ವಸಡಿನ ಭಾಗವು ಹೀರಿಕೊಳ್ಳುತ್ತದೆ.
ಇಂತಹ ಮಹತ್ವಪೂರ್ಣ ಕಾರ್ಯವನ್ನು ಮಾಡುವ ವಸಡು ಒಂದೊಮ್ಮೆ ರೋಗಪೀಡಿತವಾದರೆ ಮೊದಲು ರಕ್ತಸ್ರಾವವಾಗುವುದರ ಮೂಲಕ ತನ್ನ ಸಮಸ್ಯೆಯ ಇರುವಿಕೆಯನ್ನು ತೋರ್ಪಡಿಸುತ್ತದೆ.
ಆ ಲಕ್ಷಣಗಳನ್ನು ಎಂದಿಗೂ ನಾವು ಕಡೆಗಣಿಸಬಾರದು.
ವಸಡಿನಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣಗಳೇನು ?
* ಸ್ವಚ್ಛತೆಯ ತೀವ್ರ ಕೊರತೆ,ಹಲ್ಲುಗಳಲ್ಲಿ ಕಟ್ಟಿಕೊಂಡ ಕೊಳೆ, ಗಾರೆ, ಕಿಟ್ಟ..
* ಸಿ -ಅನ್ನಾಂಗದ ಕೊರತೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ.
* ಹಲ್ಲುಗಳ ಸಂದುಗಳಲ್ಲಿ ಪದೇ ಪದೇ ಆಹಾರ ಸಿಕ್ಕಿ ಬೀಳುವುದು ಹಾಗೂ ಅದನ್ನು ತೆಗೆಯಲು ಕಡ್ಡಿ ಪಿನ್ನು ಬಳಸುವುದು.
* ಹುಳುಕು ಹಲ್ಲು ತೀವ್ರಗತಿಯಲ್ಲಿ ಸೋಂಕು ಪೀಡಿತವಾದಾಗ.
* ಮೂರ್ಛೆ ರೋಗಕ್ಕೆ ಬಳಸುವ ಔಷಧಿ ಮಾತ್ರೆಗಳ ಅಡ್ಡ ಪರಿಣಾಮಗಳಿಂದ.
* ಸರಿಯಾದ ಕ್ರಮದಲ್ಲಿ ಹಲ್ಲು ಸ್ವಚ್ಛ ಮಾಡದಿರುವುದು.
* ಗಟ್ಟಿ ಬ್ರಷ್ ಬಳಸುವುದು. 3-4 ದಿನಕ್ಕೊಮ್ಮೆ ಬ್ರಷ್ ಮಾಡುವುದು.
* ದೀರ್ಘಕಾಲಿನ ಮಧುಮೇಹಿಗಳಲ್ಲಿ, ರಕ್ತ ತಿಳಿಯಾಗುವ ಮಾತ್ರೆ ಬಳಸುವ ಹೃದಯ ರೋಗ, ಅಧಿಕ ಕೊಲೆಸ್ಟ್ರಾಲ್ ರೋಗಿಗಳು, ಲಿವರ್ ಕಿಡ್ನಿ ಸಮಸ್ಯೆ ಇರುವವರು, ಪ್ಲೇಟ್ಲೆಟ್ ಸಂಖ್ಯೆ ಕುಸಿತವಾಗಿರುವುದು. ಲಕ್ವಾ (ಸ್ಟ್ರೋಕ್ )ಸಮಸ್ಯೆಯ ರೋಗಿಗಳು.
ಲಕ್ಷಣಗಳು :
* ವಸಡಿನಲ್ಲಿ ಬಾವು,ಕೀವು ಊತ,ಉಬ್ಬಿದ,ಒಡೆದ ವಸಡಿನ ಅಂಚುಗಳು.
* ಬ್ರಷ್ ಮಾಡಿದಾಗ, ಉಗಿದಾಗ,ಬೆಳಿಗ್ಗೆ ಎದ್ದು ಕ್ಯಾಕರಿಸಿ ಉಗಿದಾಗ ರಕ್ತ ಬರುವುದು.
* ಬಾಯಿ ತೇವಾಂಶ ರಹಿತವಾಗಿರುವುದು,ಸದಾ ಒಣಗಿದಂತಾಗುವುದು.
* ವಸಡಿನಲ್ಲಿ ಕೆಲವೊಮ್ಮೆ ತೀವ್ರ ನೋವು,ಬಿಟ್ಟು ಬಿಟ್ಟು ನೋವು ಕಾಣಿಸಿಕೊಳ್ಳುವುದು.
* ಆಹಾರ,ನೀರು,ಗಾಳಿ ಬಿಸಿ- ತಂಪು ಪದಾರ್ಥಗಳಿಗೆ ಹಲ್ಲುಗಳಲ್ಲಿ ತೀವ್ರಗತಿಯ ಸಂವೇದನೆ ಹೆಚ್ಚಾಗುವುದು.
* ವಸಡು ತನ್ನ ಮೂಲ ಸ್ಥಾನವನ್ನು ಬಿಟ್ಟು ಕೆಳಗೆ ಜಾರುವುದು ಹಲ್ಲಿನ ಬೇರುಗಳು ಗೋಚರವಾಗುವುದು.
ನಮ್ಮ ವಸಡಿನಲ್ಲಿ ರಕ್ತಸ್ರಾವ ಆಗುವ ಬಗ್ಗೆ ನಾವು ಆಗಾಗ ಕನ್ನಡಿಯ ಮುಂದೆ ನಿಂತು ಹಾಗೂ ನಮ್ಮ ಬ್ರಷ್ ನ ಬ್ರಿಸಲ್ ಭಾಗವನ್ನು ರಕ್ತಸ್ರಾವ ಆಗಿರುವ ಬಗ್ಗೆ ಗಮನಿಸಿಕೊಳ್ಳಬೇಕು.
ಏನು ಮಾಡಬೇಕು ?
* ದಂತ ವೈದ್ಯರಿಂದ ಆರು ತಿಂಗಳಿಗೆ ಒಮ್ಮೆ ದಂತ ಪರೀಕ್ಷಣೆ ಮಾಡಿ ಸರಿಯಾದ ವಿಧಾನದಲ್ಲಿ ಬ್ರಶ್ ಮಾಡುವ ವಿಧಾನ ತಿಳಿದುಕೊಂಡು ಅದನ್ನು ಅನುಸರಿಸಬೇಕು.
* ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು. ಮೃದು ಬ್ರಷ್ ಬಳಕೆ ಮಾಡಬೇಕು. ಗಟ್ಟಿ ಬ್ರಷ್ ಬಳಕೆ ಬೇಡ.
* ವಿಟಮಿನ್ ಸಿ ಅನ್ನಾಂಗದ ಕೊರತೆಯಾಗದಂತೆ ಆಹಾರದಲ್ಲಿ ನಿಂಬೆ, ಮೊಸಂಬಿ,ಕಿತ್ತಳೆ ಹಾಗೂ ಹುಳಿ ಪದಾರ್ಥವನ್ನು ಬಳಸಬೇಕು.
* ಬಾಯಿ ಸದಾ ಕಾಲ ತೇವಾಂಶ ಇರುವಂತೆ ನೋಡಿಕೊಳ್ಳಬೇಕು.
* ಹುಳುಕುಗೊಂಡ ಹಲ್ಲುಗಳ ಚಿಕಿತ್ಸೆ ವೈದ್ಯರಿಂದ ಪಡೆದುಕೊಳ್ಳಬೇಕು.
* ವರ್ಷಕ್ಕೆ ಒಂದು ಬಾರಿ ದಂತ ವೈದ್ಯರಿಂದ ಹಲ್ಲಿನ ಸ್ವಚ್ಛತೆ ಮಾಡಿಸಿಕೊಳ್ಳಬೇಕು.
* ಆಹಾರ ಕಣಗಳು ಹಲ್ಲುಗಳ ಸಂದುಗಳಲ್ಲಿ ಸಿಕ್ಕಿ ಬೀಳದಂತೆ ಹಾಗೂ ಕಡ್ಡಿ ಪಿನ್ನುಗಳ ಬಳಕೆ ಮಾಡದಂತೆ ಜಾಗ್ರತೆ ವಹಿಸಬೇಕು.
* ಪ್ರತಿ ದಿನ ಬ್ರಷ್ ಮಾಡಿದ ನಂತರ ವಸಡನ್ನು ತೋರು ಬೆರಳಿನಿಂದ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು.
* ಸಮಸ್ಯೆಯ ಕೂಲಂಕುಶ ಪರಾಮರ್ಶೆ,ರೋಗ ನಿದಾನ,ವಿಶ್ಲೇಷಣೆಗೆ ದಂತ ವೈದ್ಯರನ್ನು ಭೇಟಿ ಮಾಡಿ.
* ವಸಡು ಆರೋಗ್ಯವಾಗಿದ್ದರಷ್ಟೇ ಹಲ್ಲುಗಳು ಆರೋಗ್ಯಪೂರ್ಣ ಸ್ಥಿತಿಯಲ್ಲಿ ಇರುತ್ತವೆ ಎಂಬುದನ್ನು ಮರೆಯಬಾರದು.
*