ಉಡುಪಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಾಸ್ ಆಗುತ್ತಾರೆ ಎಂಬ ಮಾತು ಆಗಾಗ ಕೇಳಿ ಬಂದಾಗಲೂ ಶೆಟ್ಟರ್ ಇದಕ್ಕೆ ಸ್ಪಷ್ಟನೆ ನೀಡಿದ್ದರು. ನನಗೆ ಅಲ್ಲಿ ಗೌರವ ಇಲ್ಲ. ಯಾವುದೇ ಕಾರಣಕ್ಕೂ ನಾನು ವಾಪಾಸ್ ಹೋಗಲ್ಲ ಎಂದಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಬಿಜೆಪಿಗೆ ಹಾರಿದ್ದು ಎಲ್ಲರಿಗೂ ಶಾಕ್ ಎನಿಸಿದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ದಿಗ್ಭ್ರಮೆಗೊಂಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ನನಗೆ ದಿಗ್ಭ್ರಮೆಯಾಗಿದೆ. ಶೆಟ್ಟರ್ ಕಾಂಗ್ರೆಸ್ ಗೆ ಬಂದಿದ್ದು ಯಾಕೆ..? ಹೋದದ್ದು ಯಾಕೆ..? ರಾಜಕೀಯದಲ್ಲಿ ಈ ರೀತಿ ಆಗಬಾರದು. ಬಿಜೆಪಿಯಲ್ಲಿ ಅವಮಾನ ಆಯ್ತು ಅಮನತ ಕಾಂಗ್ರೆಸ್ ಗೆ ಬಂದ್ರು. ಅವರಾಗಿಯೇ ಬಂದರೂ ನಾವೂ ಅವರನ್ನು ಸ್ವಾಗತ ಮಾಡಿದೆವು. ಟಿಕೆಟ್ ಕೊಟ್ಟೆವು, ಚುನಾವಣೆಯಲ್ಲಿ ಸೋತರು. ನಮ್ಮ ಕಾರ್ಯಕರ್ತರು ಹಗಲು-ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಸೋತ ಮೇಲೂ ಅನುಕೂಲ ಆಗಬೇಕು, ತೊಂದರೆಯಾಗಬಾರದು ಎಂದು ಎಂಎಲ್ಸಿ ಮಾಡಿದೆವು.
ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ. ಆದರೆ ಯಾಕೆ ಕಾಂಗ್ರೆಸ್ ಬಿಟ್ಟರು ಎಂಬುದು ಮಾತ್ರ ತಿಳಿದಿಲ್ಲ. ಸಚಿವ ಸ್ಥಾನ ಕೇಳಿದ್ದರೋ ಏನೋ ಗೊತ್ತಿಲ್ಲ. ಏನು ಬೇಡಿಕೆ ಇಟ್ಟಿದ್ದರು ಎಂಬುದು ನನಗೆ ತಿಳಿದಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು. ನೀತಿ, ನಿಯಮ, ತತ್ವ ಸಿದ್ದಾಂತದೊಂದಿಗೆ ತೆಗೆದುಕೊಂಡು ಹೋಗಬೇಕು. ಬಂದ ಪುಟ್ಟ ಹೋದಾ ಪುಟ್ಟ ಎಂಬಂತೆ ಆಗಬಾರದು. ಬೆಳಗಾವಿಯಲ್ಲಿ ನಾನು ಮಂತ್ರಿಯಾಗಿದ್ದೇನೆ. ಬೆಳಗಾವಿ ಟಿಕೆಟ್ ಬಗ್ಗೆ ಯಾವ ಮುಖಂಡರ ಬಳಿಯೂ ಮಾತನಾಡಿಲ್ಲ. ಲಕ್ಷ್ಮಣ್ ಸವದಿ ಖಂಡಿತ ಬಿಜೆಪಿಗೆ ಹೋಗಲ್ಲ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.