ಬೆಳಗಾವಿ : ಆಡಳಿರೂಢ ಬಿಜೆಪು ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ಅಂಗೀಕಾರ ಮಾಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರೇ ಈ ಕಾಯ್ದೆಯನ್ನ ಜಾರಿಗೆ ತರಲು ಸಜ್ಜಾಗಿದ್ದರು ಎಂದು ಬಿಜೆಪಿ ಆರೋಪ ಮಾಡಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಆರ್.ಎಸ್.ಎಸ್ ಮತ್ತು ಬಿಜೆಪಿ ಸರ್ಕಾರದ ಕೂಸು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರ್.ಎಸ್.ಎಸ್ ಬೆಂಬಲಿಗರ ತಂಡ ಮತಾಂತರ ನಿಷೇಧ ಕರಡುಕಾಯ್ದೆ ರೂಪಿಸುವಂತೆ ಕಾನೂನು ಆಯೋಗಕ್ಕೆ ಮನವಿ ನೀಡಿತ್ತು. ನಮ್ಮ ಸರ್ಕಾರ ಆ ಕರಡನ್ನು ತಿರಸ್ಕರಿಸಿತ್ತು. ಈಗ ಮತ್ತೆ ಬಿಜೆಪಿ ಅದಕ್ಕೆ ಜೀವ ನೀಡುತ್ತಿದೆ.
ಕಾನೂನು ಆಯೋಗಕ್ಕೆ ಮನವಿ ನೀಡಿದ್ದ ಆರ್ ಎಸ್ ಎಸ್ ಬೆಂಬಲಿಗರ ತಂಡದಲ್ಲಿ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜೈದೇವ್, ಆರ್.ಲೀಲಾ, ಮತ್ತೂರ್ ಕೃಷ್ಣಮೂರ್ತಿ ಇದ್ದರು. ನಮ್ಮ ಸರ್ಕಾರದ ಕಾಲದಲ್ಲಿ ಕಾನೂನು ಇಲಾಖೆಯ ಕೈ ಸೇರಿದ್ದ ಕರಡು ಕಾನೂನನ್ನು 2015ರಲ್ಲಿಯೇ ತಿರಸ್ಕರಿಸಿದ್ದೆವು.
ಕರಡನ್ನು ನಾವು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಿಲ್ಲ, ಅನುಮೋದನೆಯನ್ನೂ ನೀಡಿಲ್ಲ. ಮುಖ್ಯಮಂತ್ರಿ ಈ ರೀತಿ ಸಂಪುಟ ಚರ್ಚೆಗೆ ತನ್ನಿ ಎಂದ ಅನೇಕ ವಿಷಯಗಳು, ಕಡತಗಳು ತಿರಸ್ಕರಿಸಲ್ಪಟ್ಟಿವೆ, ಕೆಲವು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ಸಂಪುಟ ಉಪ ಸಮಿತಿಗೆ ಹೋಗಿವೆ.
ಈ ಹಿಂದಿನ ಕರಡು ಪ್ರತಿಗೂ, ಈಗಿನ ಕರಡು ಮಸೂದೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಮದುವೆ ಎಂಬ ಪದ ಹೊಸದಾಗಿ ಸೇರಿಸಲಾಗಿದೆ, ಸಾಕ್ಷಾಧಾರ ಕೊರತೆ ಎದುರಾದಾಗ ದೂರುದಾರರಿಗೆ ಅನುಕೂಲವಾಗುವಂತೆ ನಿಯಮ ರೂಪಿಸಲಾಗಿದೆ.
ಸಾಮಾನ್ಯರು ಮತಾಂತರವಾದಾಗ ಒಂದು ಶಿಕ್ಷೆ, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಅಪ್ರಾಪ್ತರು, ಬುದ್ದಿಭ್ರಮಣೆಯಾದವರನ್ನು ಮತಾಂತರ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಆದರೆ ಇಂತಹುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನ ಎದುರು ಸರ್ವರೂ ಸಮಾನರು.
ಕಾನೂನು ಇಲಾಖೆ ಮೂಲಕ ಬಂದಿದ್ದ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ನಮ್ಮ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು ಸಂಪುಟದ ಮುಂದೆ ತರುವ ಅಗತ್ಯವಿಲ್ಲ ಎಂದು ಷರಾ ಬರೆದು ತಿರಸ್ಕರಿಸಿದ್ದರು.
ತಿರಸ್ಕೃತಗೊಂಡ ಕರಡು ಕಾಯ್ದೆ ನಮ್ಮ ಸರ್ಕಾರದ ಕಾಲಾವಧಿಯಲ್ಲಿ ಮತ್ತೆಂದೂ ಚರ್ಚೆಗೆ ಬರಲಿಲ್ಲ. ನಮಗೆ ಇಂಥದ್ದೊಂದು ಕಾಯ್ದೆ ತರುವ ಬಗ್ಗೆ
ಇದ್ದಿದ್ದರೆ 2015 ರ ನವೆಂಬರ್ ನಲ್ಲಿ ಸಹಿ ಹಾಕಿ ಸಂಪುಟ ಚರ್ಚೆಗೆ ಕಳುಹಿಸಿದ್ದ ಕಡತ, ತಿರಸ್ಕಾರಗೊಂಡ ನಂತರ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದರ ಕಡೆ ಗಮನ ನೀಡದೆ ಇರುತ್ತಿದ್ದೆವಾ?.
ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಕೈವಾಡದಿಂದ ರೂಪುಗೊಂಡಿದ್ದರಲ್ಲಿ ಅನುಮಾನವೇ ಇಲ್ಲ. ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ಎಲ್ಲಾ ರಾಜ್ಯಗಳ ಕಾನೂನು ಒಂದೇ ರೀತಿಯ ಪದಬಳಕೆಯಿಂದ ಕೂಡಿದೆ. ಒಬ್ಬರೇ ಮೂರೂ ಕರಡು ಕಾಯ್ದೆಗಳನ್ನು ತಯಾರು ಮಾಡಿದಂತಿದೆ.
ನಾವು ಸಂವಿಧಾನದ ಆಶಯಕ್ಕನುಗುಣವಾಗಿ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ಯಾರ ಪರ-ವಿರೋಧವೂ ಇಲ್ಲ. ಇದು ಒಂದೆರಡು ಧರ್ಮಗಳನ್ನು ಗುರಿಯಾಗಿರಿಸಿರುವ ಕಾನೂನು. ನಿರುದ್ಯೋಗ, ಭ್ರಷ್ಟಾಚಾರ, ಅತಿವೃಷ್ಟಿ ಪರಿಹಾರ, ಬೆಲೆಯೇರಿಕೆ ಹೀಗೆ ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದಾವೆ, ಇವುಗಳಿಂದ ಜನರನ್ನು ವಿಮುಖಗೊಳಿಸಲು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರದ ಜಾರಿಗೊಳಿಸಲು ಹೊರಟಿದೆ ಎಂದಿದ್ದಾರೆ.