ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆ.29 : ಹಣ ನೀಡಿ ಡಾಕ್ಟರೇಟ್ ಪದವಿ ಪಡೆಯುವವರೆ ಹೆಚ್ಚು ಮಂದಿಯಿರುವ ಇಂದಿನ ಕಾಲದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕ್ಷೇತ್ರದ ಅಭಿವೃದ್ದಿ ಮೂಲಕ ಜನಸೇವೆಯನ್ನೆ ಉಸಿರಾಗಿಸಿಕೊಂಡು ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆಂದು ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಕುಮಾರ ಸ್ವಾಮಿಗಳು ಹೇಳಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರಿಂದ ತ.ರಾ.ಸು.ರಂಗಮಂದಿರದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪನವರಿಗೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗೌರವ ಸಮರ್ಪಣಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯಾವುದೇ ವ್ಯಕ್ತಿ ಹುಟ್ಟುವಾಗಲೆ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಬರುವುದಿಲ್ಲ. ಬಡತನದ ಬೇಗೆಯನ್ನು ಎದುರಿಸಿ ಬೆಳೆದವರು ಮಾತ್ರ ಅದ್ಬುತ ಸಾಧನೆ ಮಾಡುತ್ತಾರೆ. ಆ ಸಾಲಿನಲ್ಲಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಸೇರುತ್ತಾರೆ.
ಮುದ್ದಿನಿಂದ ಬೆಳೆಸಿದ ತಂದೆ-ತಾಯಿಗಳನ್ನು ನಿರ್ಲಕ್ಷಿಸುವ ಮಕ್ಕಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಶಾಸಕ ಎಂ.ಚಂದ್ರಪ್ಪನವರ ಪುತ್ರ ರಘುಚಂದನ್‍ರವರಲ್ಲಿ ಗುರುಭಕ್ತಿ, ಶ್ರದ್ದೆ, ಗೌರವ, ಜನಪರ ಕಾಳಜಿಯಿರುವುದು ನಮಗೆ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾವಂತರಾಗಿ ಶ್ರೀಮಂತರಾಗಿದ್ದೇವೆ. ಅಧಿಕಾರ ಇದೆ ಎಂದು ಅಹಂಕಾರ ಪಟ್ಟರೆ ಮುಂದೊಂದು ದಿನ ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ. ಆದರೆ ಎಂ.ಚಂದ್ರಪ್ಪ ಗೆದ್ದಾಗ ಹೇಗೆ ನಮ್ಮ ಮಠಕ್ಕೆ ಬರುತ್ತಿದ್ದರೋ ಸೋತ ಮೇಲೂ ಅದೇ ರೀತಿ ಬರುತ್ತಿದ್ದರು. ಕ್ಷೇತ್ರದ ಜನರ ಬಗ್ಗೆ ಅಭಿಮಾನ, ಗುರುಗಳ ಬಗ್ಗೆ ಅವರಲ್ಲಿರುವ ಗೌರವದ ಕಾರಣ ಪದೆ ಪದೆ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೇಮಾ ಹೇಮಿಗಳು ಸೋತಿದ್ದಾರೆ. ಆದರೆ ಹೊಳಲ್ಕೆರೆ ಕ್ಷೇತ್ರದ ಎಂ.ಚಂದ್ರಪ್ಪ ಮಾತ್ರ ಸೋಲಲಿಲ್ಲ. ಅದಕ್ಕೆ ಅವರು ಗಳಿಸಿರುವ ಜನಪ್ರಿಯತೆಯೆ ಸಾಕ್ಷಿ ಎಂದರು.
ಗೆದ್ದು ಮಂತ್ರಿಯಾಗುವುದು ಮುಖ್ಯವಲ್ಲ. ಶಾಸಕನಾಗಿದ್ದುಕೊಂಡೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ದಿಪಡಿಸಬಹುದು. ಡಾಕ್ಟರೇಟ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಕ್ಷೇಪಣೆಗಳು ಬರುತ್ತಿದೆ. ಡಾಕ್ಟರ್ ಎನ್ನುವುದು ಒಂದು ಗೌರವದ ಪದ ಅಷ್ಟೆ. ಅದನ್ನು ಪಡೆಯುವಾಗ ಸಾಧನೆ ಮುಖ್ಯ. ಡಾ.ಎಂ.ಚಂದ್ರಪ್ಪನವರು 29 ವರ್ಷಗಳಿಂದ ಶಾಸಕನಾಗಿದ್ದುಕೊಂಡು ಅನೇಕ ಜನಪರ ಕೆಲಸ ಮಾಡಿರುವುದನ್ನು ಗುರುತಿಸಿ ಕುವೆಂಪು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ಕೆಲಸ ಮಾಡುವವರಿಗೆ ಅದು ಸ್ಪೂರ್ತಿ ಎಂದು ತಿಳಿಸಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ಅಹಂಕಾರ ಯಾರನ್ನು ಎತ್ತರಕ್ಕೆ ಬೆಳೆಸುವುದಿಲ್ಲ. ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರಲ್ಲಿ ವಿನಯತೆ ಇರುವುದರಿಂದಲೆ ಅವರನ್ನು ಗೌರವ ಡಾಕ್ಟರೇಟ್ ಪದವಿ ಹುಡುಕಿಕೊಂಡು ಬಂದಿದೆ. ಒಂದು ಕಾಲದಲ್ಲಿ ಟೀ.ಮಾರುವ ವ್ಯಕ್ತಿ ಈಗ ದೇಶದ ಪ್ರಧಾನಿಯಾಗಿದ್ದಾರೆಂದರೆ ಸುಲಭದ ಮಾತಲ್ಲ. ಚಂದ್ರಪ್ಪನವರ ಆಡಳಿತ ಅಚ್ಚುಕಟ್ಟಾಗಿದೆ. ಸೇವಕನ ನೀಯತ್ತು ಮಾಲೀಕನ ಸಂಪತ್ತು ಎನ್ನುವಂತಿದೆ.
ವಿದ್ಯಾಕ್ಷೇತ್ರ ನಾಶವಿಲ್ಲದ್ದು, ಶಾಶ್ವತವಾಗಿರುತ್ತದೆ. ಇನ್ನು ಅನೇಕ ಅತ್ಯುನ್ನತ ಪದವಿಗಳು ಅವರಿಗೆ ಲಭಿಸಲಿ. ಹಣ ಕೊಟ್ಟು ಪದವಿಗಳನ್ನು ತೆಗೆದುಕೊಳ್ಳುವುದು ಬೇಸರ. ಆದರೆ ಶಾಸಕ ಚಂದ್ರಪ್ಪನವರು ತಮ್ಮ ಸಾಧನೆ ಮೂಲಕ ಗೌರವ ಡಾಕ್ಟರೇಟ್ ಪದವಿಯನ್ನು ಒಲಿಸಿಕೊಂಡಿದ್ದಾರೆಂದು ಗುಣಗಾನ ಮಾಡಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ಮಾತನಾಡುತ್ತ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರು ಸೂರ್ಯ ಚಂದ್ರ ಇರುವತನಕ ಅಜರಾಮರವಾಗಿರುವಂತ ಕೆಲಸ ಮಾಡಿದ್ದಾರೆ. ಯಾವ ಗ್ರಾಮಕ್ಕೆ ಏನು ಬೇಕು. ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕೈಗೊಂಡರೆ ಒಳ್ಳೆಯದಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜನರ ನಾಡಿ ಮಿಡಿತ ಬಲ್ಲವರಿಂದ ಮಾತ್ರ ಏನಾದರೂ ಸಾಧಿಸಬಹುದು. ಡಾಕ್ಟರ್‍ಗಳಿಗೆ ಮಾತ್ರ ಜನರ ನಾಡಿಮಿಡಿತ ಗೊತ್ತು. ಅದೇ ರೀತಿ ಶಾಸಕ ಎಂ.ಚಂದ್ರಪ್ಪನವರಿಗೆ ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿರುವುದರಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಹೇಳಿದರು.
ಜೀವನದಲ್ಲಿ ಛಲ, ಗುರಿ ಹೊಂದಿರುವ ವ್ಯಕ್ತಿ ಮಾತ್ರ ಸಮಾಜದಲ್ಲಿ ಉಳಿಯುತ್ತಾರೆ. ಚಂದ್ರಪ್ಪನವರ ಯೋಗ್ಯತೆಗೆ ಕ್ಷೇತ್ರದ ಜನ ಪದೆ ಪದೆ ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಎಲ್ಲಾ ರೀತಿಯ ಕಷ್ಟ ಪಟ್ಟು ಎತ್ತರಕ್ಕೆ ಬೆಳೆದಿದ್ದಾರೆ. ರೈತರಿಗೆ ಕೆರೆಗಳನ್ನು ತುಂಬಿಸಿ ವಿದ್ಯುತ್ ಪೂರೈಸಿ ಬರಗಾಲವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ತುಂಬಿದ್ದಾರೆ. ಡಾ.ಎಂ.ಚಂದ್ರಪ್ಪ ದಂಪತಿಗಳು ಹಾಗೂ ಅವರ ಮಕ್ಕಳ ಸೇವೆ ನಿಸ್ವಾರ್ಥವಾದುದು ಎಂದು ಶ್ಲಾಘಿಸಿದರು.
ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತು ಸಾಧನೆಯಾಗಬಾರದು. ಸಾಧನೆ ಮಾತಾಗಬೇಕೆಂದು ಸಿರಿಗೆರೆ ಹಾಗೂ ಸಾಣೆಹಳ್ಳಿಯ ಇಬ್ಬರು ಶ್ರೀಗಳು ನನಗೆ ಯಾವಾಗಲು ಹೇಳುತ್ತಿರುತ್ತಾರೆ. ಅದೇ ಪ್ರಕಾರ ನಾನು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಜನ ಮತ್ತೆ ನನ್ನನ್ನು ಗೆಲ್ಲಿಸಿದ್ದಾರೆ.
ರಾಜಕಾರಣಿಗೆ ಎತ್ತರಕ್ಕೆ ಹೋಗುವ ಅವಕಾಶವಿದೆ. ಅದೇ ರೀತಿ ಒಂದು ಪಕ್ಷಿ ಎಷ್ಟು ಎತ್ತರಕ್ಕೆ ಬೇಕಾದರೂ ಹಾರಬಹುದು. ಕೊನೆಗೆ ಆಹಾರಕ್ಕಾಗಿ ಕೆಳಗೆ ಇಳಿಯಲೇಬೇಕು. ನಾನು ಕೂಡ ರಾಜಕಾರಣದಲ್ಲಿ ಉತ್ತುಂಗಕ್ಕೆ ಹೋಗಿದ್ದರೂ ಅಂತಿಮವಾಗಿ ಸಾರ್ವಜನಿಕರ ಬಳಿ ಬರಲೇಬೇಕು. ಪರಮ ಪೂಜ್ಯರ ಮಾತಿನಿಂದ ಪ್ರೇರೇಪಿತನಾಗಿ ಜನ ಸೇವೆ ಮಾಡುತ್ತಿದ್ದೇನೆ. ಮಸಿಯಪ್ಪ ಹಾಗೂ ಹೆಚ್.ಏಕಾಂತಯ್ಯನವರು ನನ್ನನ್ನು ರಾಜಕೀಯದಲ್ಲಿ ಬೆಳೆಸಿದವರು ಎಂದು ನೆನಪಿಸಿಕೊಂಡರು.
ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಳಂಕರಹಿತವಾಗಿ ಕೆಲಸ ಮಾಡುತ್ತಿದ್ದೇನೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಸಿಕ್ಕೆ ಸಿಗುತ್ತದೆ. ಅಧಿಕಾರ ಶಾಶ್ವತವಲ್ಲ. ಸಿಕ್ಕ ಅವಕಾಶವನ್ನು ಸಾರ್ವಜನಿಕರಿಗೆ ಧಾರೆ ಎರೆಯಬೇಕು. ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು. ದೊಡ್ಡ ಶಿಕ್ಷಣ ಸಂಸ್ಥೆ ತೆರೆಯಲು ನನ್ನ ಧರ್ಮಪತ್ನಿ ಕಾರಣ. ಯಾವುದೇ ಫಲಾಪೇಕ್ಷೆಯಿಲ್ಲದೆ ಹೊಳಲ್ಕೆರೆ ಕ್ಷೇತ್ರದ ಜನ ಸೇವೆ ಮಾಡಿಕೊಂಡು ಬರುತ್ತಿರುವುದರಿಂದ ಕುವೆಂಪು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯನ್ನು ಕುಟುಂಬದ ಸದಸ್ಯರೆಂದು ಭಾವಿಸಿದ್ದೇನೆ. ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ನೌಕರರ ಪರಿಶ್ರಮವಿದೆ ಎಂದು ಸ್ಮರಿಸಿದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ಶಾಸಕ ಡಾ.ಎಂ.ಚಂದ್ರಪ್ಪನವರು ಜನ ಸೇವೆ ಮಾಡಿಕೊಂಡು ಬರುತ್ತಿರುವುದರಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ. ದೊಡ್ಡ ವಿದ್ಯಾಸಂಸ್ಥೆ ಕಟ್ಟಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ. ಡಾಕ್ಟರೇಟ್ ಪದವಿ ಸಿಕ್ಕಿರುವುದರ ಹಿಂದೆ ಸಾಧನೆಯಿದೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ರುದ್ರಮುನಿ ಇವರುಗಳು ಮಾತನಾಡಿದರು. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಹೋಟೆಲ್ ಉದ್ಯಮಿ ಕೃಷ್ಣರಾಜಭಟ್, ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ ಪಾಲಯ್ಯ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿ.ಇ.ಓ. ಎಂ.ಸಿ. ರಘುಚಂದನ್, ಶ್ರೀಮತಿ ಯಶಸ್ವಿನಿ ಕಿರಣ್, ಐ.ಜಿ.ಚಂದ್ರಶೇಖರಯ್ಯ ವೇದಿಕೆಯಲ್ಲಿದ್ದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಶ್ರೀಮತಿ ಚಂದ್ರಕಲಾ ಹೆಚ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.