ಬೆಂಗಳೂರು: ನಿನ್ನೆಯಷ್ಟೇ ಕರ್ನಾಟಕ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವಾಗಿದೆ. ಆದರೆ ಹಿಮಾಚಲ ಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆ ಎಐಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಡಿಸಿಎಂ ಡಿಕೆ ಶಿವಕುಮಾರ್ ಹಿಮಾಚಲ ಪ್ರದೇಶಕ್ಕೆ ದೌಡಾಯಿಸಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ಡಿಕೆ ಶಿವಕುಮಾರ್ ಅವರಿಗೆ ಸರಿ ಮಾಡುವ ಜವಾಬ್ದಾರಿ ನೀಡಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಪಾಯ ಎದುರಾಗಿರುವ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಳುಹಿಸಲಾಗಿದೆ. ರಾಜಕೀಯದ ಮಹತ್ವ ಬೆಳವಣಿಗೆಯಲ್ಲಿ ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಶಾಸಕರು ಮತ್ತು ಬಿಜೆಪಿ ನಾಯಕರು ಪಟ್ಟು ಹಿಡಿದು ಕುಳಿತಿದ್ದಾರೆ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿ, ಹಿಮಾಚಲ ಪ್ರದೇಶಕ್ಕೆ ಕಳುಹಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಭಷೇಕ್ ಮನು ಸಿಂಘ್ವಿ ಸ್ಪರ್ಧೆ ಮಾಡಿದ್ದರು. ಸಂಖ್ಯಾಬಲದ ಪ್ರಕಾರ ಅವರೇ ಗೆಲ್ಲಬೇಕಿತ್ತು ಕೂಡ. ಆದರೆ ಅವರು ಸೋತಿದ್ದಾರೆ. ಕಾಂಗ್ರೆಸ್ ನ ಆರು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಬಿಜೆಪಿಗೆ ವೋಟ್ ಹಾಕಿದ್ದಾರೆ. ಇದು ಕಾಂಗ್ರೆಸ್ ಗೆ ಅಪಾಯವಾದಂತೆ ಆಗಿದೆ. ಕಾಂಗ್ರೆಸ್ ಶಾಸಕರು ಸಿಎಂ ವಿರುದ್ಧ ತಿರುಗಿ ಬಿದ್ದ ಬಳಿಕ ಬಿಜೆಪಿ ನಾಯಕರು ಹಿಮಾಚಲ ಪ್ರದೇಶ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಸಿಎಂ ಸುಖವಿಂದರ್ ಸಿಂಗ್ ಸುಳು ಅವರಿಗೆ ವಿಶ್ವಾಸ ಮತಯಾಚನೆ ಮಾಡಲು ಬಿಜೆಪಿ ಒತ್ತಾಯ ಮಾಡಿದೆ. ಈ ರಾಜಕೀಯದಾಟದಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ತಿಳಿಗೊಳಿಸಲು ಡಿಕೆ ಶಿವಕುಮಾರ್ ಅವರನ್ನು ಕಳುಹಿಸಲಾಗಿದೆ.