ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಸಿ ಈಗಷ್ಟೇ ತಣ್ಣಗಾಗಿದೆ. ಚುನಾವಣೆ ಮುಗಿದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸಿಪಿ ಯೋಗೀಶ್ವರ್ ಇದೀಗ ಸೋಲಿನ ಮಾತಾಡುತ್ತಿದ್ದಾರೆ. ಡಿಕೆ ಬ್ರದರ್ಸ್ ಗೆ ಇದೊಂದು ಪ್ರತಿಷ್ಠೆಯ ಕಣವಾಗಿತ್ತು. ಬಿಜೆಪಿಯಲ್ಲಿದ್ದ ಯೋಗೀಶ್ವರ್ ಅವರನ್ನು ಕರೆತಂದು ಕಾಂಗ್ರೆಸ್ ನಿಂದ ನಿಲ್ಲಿಸಿದ್ದರು. ಇಂದಿಗೂ ಗೆದ್ದೆ ಗೆಲ್ಲುವ ಭರವಸೆಯನ್ನು ಹೊಂದಿದ್ದರು. ಆದರೆ ಅದ್ಯಾಕೋ ಏನೋ ಸಿಪಿ ಯೋಗೀಶ್ವರ್ ಅವರೇ ಹಿನ್ನಡೆಯ ಮಾತುಗಳನ್ನಾಡುತ್ತಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯೋಗೀಶ್ವರ್ ಅವರು, ಚುನಾವಣೆಯಲ್ಲಿ ಸೋತರೆ ನಾನು ಪಕ್ಷಾಂತರ ಮಾಡಿದ್ದನ್ನು ಜನ ಒಪ್ಪಲಿಲ್ಲ ಎಂದೇ ಅರ್ಥ. ಪಕ್ಷವನ್ನು ಆಗಾಗ ಬದಲಾಯಿಸಿದ್ದಕ್ಕೆ ಜನ ತಿರಸ್ಕಾರ ಮಾಡಿದ್ದಾರೆ ಎನ್ನಬಹುದು. ಜೊತೆಗೆ ಕಾಂಗ್ರೆಸ್ ನ ವರ್ಚಸ್ಸು ಏನು ಇಲ್ಲ ಎನ್ನಬಹುದು. ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಎಲ್ಲಾ ಕ್ಷೇತ್ರದ ಚುನಾವಣೆಗಿಂತ ಭಿನ್ನವಾಗಿದೆ. ಇಬ್ಬರು ಒಂದೇ ಸಮುದಾಯದಿಂದ ಸ್ಪರ್ಧೆ ಮಾಡಿದ್ದೇವೆ. ಜೊತೆಗೆ ಪ್ರಬಲ ವ್ಯಕ್ತಿ ಗೆಲ್ಲಿಸಲು ದೇವೇಗೌಡರು, ಕುಮಾರಸ್ವಾಮಿ ಕೆಲಸ ಮಾಡಿದ್ದಾರೆ.
ಫಲಿತಾಂಶ ಏನಾಗುತ್ತೋ ನೋಡಬೇಕಿದೆ. ಆತ್ಮವಿಶ್ವಾಸ ಕುಗ್ಗಿಲ್ಲ. ಸಮಾನ ಮನಸ್ಕಾರಾಗಿ ನೋಡಿದಾಗ ಈಗೋ ಆಗೋ ಆಗಿರಲುಬಹುದು. ಈಗ ನಾನು ಸೋತಿದ್ದೇನೆ ಎಂದು ಅಲ್ಲ, ಸಮಬಲ ಹೋರಾಟ ಇದೆ ಎಂದು. ರಾಜಕೀಯ ದೈತ್ಯ ದೇವೇಗೌಡರಿಗೆ ಮೊಮ್ಮಗನನ್ನು ಗೆಲ್ಲಿಸಬೇಕು ಹಠ ಇತ್ತು. ಇದಕ್ಕಾಗಿ ಶಪಥ ಮಾಡಿದ್ದರು. ಒಕ್ಕಲಿಗರು ಹೆಚ್ಚಾಗಿ ಇರುವ ಕ್ಷೇತ್ರ ಇದು. ಇದನ್ನು ಉಳಿಸಿಕೊಳ್ಳಲೇಬೇಕು ಎಂಬುದು ಕುಮಾರಸ್ವಾಮಿ ಅವರಿಗೆ ಇತ್ತು. ಇದಕ್ಕಾಗಿ ಅವಿರತ ಹೋರಾಟ ಮಾಡಿದ್ದಾರೆಂದು ಹೇಳುವ ಮೂಲಕ ಪರೋಕ್ಷವಾಗಿ ಸೋಲು ಒಪ್ಪಿಕೊಂಡರಾ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ ಅವರ ಮಾತುಗಳು.