ಮೈಸೂರು: ಪರಿಷತ್ ಚುನಾವಣೆ ಜೂನ್ 3ರಂದು ನಡೆಯಲಿದೆ. ಈ ಚುನಾವಣೆಗೆ ಮೂರು ಪಕ್ಷದಿಂದಲೂ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಬಾರಿ ಪರಿಷತ್ ಚುನಾವಣೆಗಾದರೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಗ ವಿಜಯೇಂದ್ರಗೆ ಟಿಕೆಟ್ ಸಿಗುತ್ತಾ ಎಂಬ ನಂಬಿಕೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಅದು ಕೂಡ ಹುಸಿಯಾಗಿದೆ. ಈ ಸಂಬಂಧ ಹಲವರು ಬೇಸರ ಹೊರ ಹಾಕಿದರೆ, ಶಾಸಕ ಹರ್ಷವರ್ಧನ್ ಮಾತ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಶಾಸಕ ಹರ್ಷವರ್ಧನ್, ಪರಿಷತ್ ಟಿಕೆಟ್ ಕೈತಪ್ಪಿದ್ದರಿಂದ ವರುಣಾ ಕ್ಷೇತ್ರದ ಸ್ಪರ್ಧೆಗೆ ಹಾದಿ ಸುಗಮವಾಗಿದೆ. ಹೈಕಮಾಂಡ್ ನಾಯಕರು ಅಸೆಂಬ್ಲಿ ಟಿಕೆಟ್ ನೀಡುವ ಭರವಸೆ ಇದೆ. ವಿಜಯೇಂದ್ರ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕೆಂಬ ಬಯಕೆ ಜನರದ್ದು. ಹೀಗಾಗಿ ಈ ಬಾರಿಯ ಪರಿಷತ್ ಟಿಕೆಟ್ ಕೈತಪ್ಪಿದ್ದು ಬೇಸರವಾದರೂ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡರೆ ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದಿದ್ದಾರೆ.
ರಾಜ್ಯದಲ್ಲಿ ಇಂದು ಬಿಜೆಪಿ ಸರ್ಕಾರವಿದೆ ಎಂದರೆ ಅದಕ್ಕೆ ವಿಜಯೇಂದ್ರ ಅವರು ಕೂಡ ಕಾರಣ. ಹದಿಮೂರು ಉಪಚುನಾವಣೆಯಲ್ಲೂ ಬಿಜೆಪಿ ಗೆಲುವಿಗಾಗಿ ಅವರ ಹೇಗೆ ಶ್ರಮಸಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ಯುವಕರಿಗೆ ಅವಕಾಶ ನೀಡುತ್ತೇವೆ ಎಂದು ಹೈಕಮಾಂಡ್ ತಿಳಿಸಿದೆ. ಹೀಗಾಗಿ ವಿಜಯೇಂದ್ರ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೆ ಎಂಬ ಭರವಸೆ ಇದೆ ಎಂದಿದ್ದಾರೆ.