ರೋಮ್: ಕ್ಯಾಲೆಂಡರ್ ತೆರೆದಾಗ ಕಾಣುವ 12 ತಿಂಗಳುಗಳು ಸಹಜ ಅಥವಾ ಅನಿವಾರ್ಯವೆಂದು ನಮಗೆ ಅನ್ನಿಸಬಹುದು. ಆದರೆ ಇದರ ಹಿಂದೆ ಸುದೀರ್ಘ ವಾದಗಳು, ರಾಜಕೀಯ ಹುನ್ನಾರಗಳು ಮತ್ತು ಋತುಮಾನಗಳನ್ನೇ ಬುಡಮೇಲು ಮಾಡಿದ್ದ ಐತಿಹಾಸಿಕ ತಪ್ಪು ಲೆಕ್ಕಾಚಾರಗಳ ರೋಚಕ ಕಥೆಯಿದೆ.
ಹತ್ತು ತಿಂಗಳ ಪುರಾತನ ರೋಮನ್ ಕ್ಯಾಲೆಂಡರ್
ರೋಮ್ ನಗರದ ಸಂಸ್ಥಾಪಕ ಎಂದು ನಂಬಲಾದ ರೋಮುಲಸ್ನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಆರಂಭಿಕ ಕ್ಯಾಲೆಂಡರ್ನಲ್ಲಿ ಕೇವಲ 10 ತಿಂಗಳುಗಳು (ಸುಮಾರು 304 ದಿನಗಳು) ಮಾತ್ರ ಇದ್ದವು. ವರ್ಷವು ಮಾರ್ಚ್ ತಿಂಗಳಿಂದ ಆರಂಭವಾಗುತ್ತಿತ್ತು. ಲ್ಯಾಟಿನ್ ಭಾಷೆಯ ಏಳು, ಎಂಟು, ಒಂಬತ್ತು ಮತ್ತು ಹತ್ತು ಎಂಬ ಅಂಕಿಗಳ ಆಧಾರದ ಮೇಲೆಯೇ ಇಂದಿಗೂ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಿಗೆ ಆ ಹೆಸರುಗಳು ಉಳಿದುಕೊಂಡಿವೆ. ಆ ಕಾಲದಲ್ಲಿ ಚಳಿಗಾಲದ ಸುಮಾರು 60 ದಿನಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ; ಯಾವುದೇ ಹೆಸರಿಲ್ಲದ ಶೂನ್ಯ ಅವಧಿಯಂತೆ ಅದನ್ನು ಬಿಡಲಾಗುತ್ತಿತ್ತು.

ಕ್ರಿ.ಪೂ. 7ನೇ ಶತಮಾನದಲ್ಲಿ ರೋಮನ್ ದೊರೆ ನುಮಾ ಪೊಂಪಿಲಿಯಸ್ ಈ ಚಳಿಗಾಲದ ಕಂದಕವನ್ನು ಮುಚ್ಚಲು ‘ಜನವರಿ’ ಮತ್ತು ‘ಫೆಬ್ರವರಿ’ ತಿಂಗಳುಗಳನ್ನು ಸೇರಿಸಿ, ಒಟ್ಟು ತಿಂಗಳುಗಳ ಸಂಖ್ಯೆಯನ್ನು 12ಕ್ಕೆ ಏರಿಸಿದನು. ಆದರೂ 355 ದಿನಗಳ ಈ ವರ್ಷ ಸೌರಮಾನ ವರ್ಷಕ್ಕಿಂತ 10 ದಿನ ಕಡಿಮೆಯಿತ್ತು. ಇದನ್ನು ಸರಿದೂಗಿಸಲು ಕೆಲ ವರ್ಷಗಳಿಗೊಮ್ಮೆ ‘ಮರ್ಸೆಡೋನಿಯಸ್’ ಎಂಬ ಅಧಿಕ ತಿಂಗಳನ್ನು ಸೇರಿಸುವ ಅಧಿಕಾರ ನೀಡಲಾಯಿತು.
‘ಗೊಂದಲದ ವರ್ಷ’
ಕಾಲಕ್ರಮೇಣ ಈ ಅಧಿಕಾರವು ಭಾರೀ ಭ್ರಷ್ಟಾಚಾರಕ್ಕೆ ದಾರಿಯಾಯಿತು. ಅಧಿಕಾರದಲ್ಲಿದ್ದವರು ತಮಗೆ ಬೇಕಾದ ಆಡಳಿತಗಾರರ ಅವಧಿಯನ್ನು ವಿಸ್ತರಿಸಲು ಅಥವಾ ಸಾಲ ತೀರಿಸುವ ಗಡುವನ್ನು ಬದಲಾಯಿಸಲು ಮನಬಂದಂತೆ ತಿಂಗಳುಗಳನ್ನು ಸೇರಿಸಲಾರಂಭಿಸಿದರು. ಪರಿಣಾಮವಾಗಿ, ಜೂಲಿಯಸ್ ಸೀಸರ್ ಅಧಿಕಾರಕ್ಕೆ ಬರುವ ಹೊತ್ತಿಗೆ ಕ್ಯಾಲೆಂಡರ್ ಋತುಮಾನಗಳಿಗಿಂತ ಬರೋಬ್ಬರಿ ಮೂರು ತಿಂಗಳು ಹಿಂದಿ ಬಿದ್ದಿತ್ತು.
ಈ ಗೊಂದಲ ನಿವಾರಿಸಲು ಸೀಸರ್, ಈಜಿಪ್ಟ್ನ ಖಗೋಳಶಾಸ್ತ್ರಜ್ಞ ಸೊಸಿಜೆನೆಸ್ ಮೊರೆಹೋದನು. ಸೌರ ವರ್ಷವು ಸುಮಾರು 365.25 ದಿನಗಳನ್ನು ಒಳಗೊಂಡಿದೆ ಎಂದು ಲೆಕ್ಕ ಹಾಕಿದ ಸೊಸಿಜೆನೆಸ್, 4 ವರ್ಷಕ್ಕೊಮ್ಮೆ ಒಂದು ಹೆಚ್ಚುವರಿ ದಿನ (ಲೀಪ್ ಇಯರ್) ಸೇರಿಸುವ ಪರಿಹಾರ ನೀಡಿದನು. ಋತುಗಳನ್ನು ಮರಳಿ ಹಳಿಗೆ ತರಲು ಕ್ರಿ.ಪೂ. 46ನೇ ವರ್ಷವನ್ನು ಬರೋಬ್ಬರಿ 445 ದಿನಗಳವರೆಗೆ ವಿಸ್ತರಿಸಲಾಯಿತು; ರೋಮನ್ನರು ಇದನ್ನು “ಗೊಂದಲದ ವರ್ಷ” (Year of Confusion) ಎಂದೇ ಕರೆದರು.
ಅಧಿಕಾರ ಪ್ರದರ್ಶನಕ್ಕೆ ನಾಮಕರಣ
ಜೂಲಿಯನ್ ಕ್ಯಾಲೆಂಡರ್ನಲ್ಲಿ 12 ತಿಂಗಳುಗಳೇ ಉಳಿದುಕೊಂಡರೂ ಹೆಸರುಗಳಲ್ಲಿ ಬದಲಾವಣೆಗಳಾದವು. ಸೀಸರ್ನ ಗೌರವಾರ್ಥ ಐದನೇ ತಿಂಗಳಾಗಿದ್ದ ‘ಕ್ವಿಂಟಿಲಿಸ್’ಗೆ ‘ಜುಲೈ’ ಎಂದು ಹೆಸರಿಡಲಾಯಿತು. ನಂತರ ಬಂದ ಆಗಸ್ಟಸ್ ಚಕ್ರವರ್ತಿಯು ಆರನೇ ತಿಂಗಳಾಗಿದ್ದ ‘ಸೆಕ್ಸ್ಟಿಲಿಸ್’ಗೆ ‘ಆಗಸ್ಟ್’ ಎಂದು ಮರುನಾಮಕರಣ ಮಾಡಿದನು. ಇಬ್ಬರೂ ತಮ್ಮ ಪ್ರತಿಷ್ಠೆಗಾಗಿ ತಮ್ಮ ಹೆಸರಿನ ತಿಂಗಳುಗಳಿಗೆ ತಲಾ 31 ದಿನಗಳನ್ನು ಹಂಚಿಕೊಂಡಿದ್ದರಿಂದ, ಕೊನೆಯಲ್ಲಿ ಉಳಿದ ಫೆಬ್ರವರಿ ತಿಂಗಳಿಗೆ ಕಡಿಮೆ ದಿನಗಳು ನಿಗದಿಯಾದವು.
ಗ್ರೆಗೋರಿಯನ್ ಪರಿಷ್ಕರಣೆ
ಸೊಸಿಜೆನೆಸ್ನ ಲೆಕ್ಕಾಚಾರದಲ್ಲಿ ಪ್ರತಿ ವರ್ಷಕ್ಕೆ ಸುಮಾರು 11 ನಿಮಿಷಗಳ ಸಣ್ಣ ವ್ಯತ್ಯಾಸವಿತ್ತು. ಇದು 1,500 ವರ್ಷಗಳಲ್ಲಿ ಬರೋಬ್ಬರಿ 10 ದಿನಗಳ ವ್ಯತ್ಯಾಸವನ್ನು ತಂದೊಡ್ಡಿತು. ಪರಿಣಾಮವಾಗಿ ಈಸ್ಟರ್ ಹಬ್ಬದ ದಿನ ನಿಗದಿಪಡಿಸುವ ವಸಂತ ವಿಷುವತ್ ಸಂಕ್ರಾಂತಿಯ ದಿನಾಂಕ ತಪ್ಪಿಹೋಯಿತು. ಇದನ್ನು ಸರಿಪಡಿಸಲು 1582ರಲ್ಲಿ ಪೋಪ್ ಗ್ರೆಗೊರಿ XIII ಕ್ಯಾಲೆಂಡರ್ನಿಂದ 10 ದಿನಗಳನ್ನು ಕೈಬಿಟ್ಟು, ಶತಮಾನದ ವರ್ಷಗಳ ಲೀಪ್ ಇಯರ್ ನಿಯಮಗಳನ್ನು ಬಿಗಿಗೊಳಿಸಿದನು. ಆದರೆ ಇಲ್ಲೂ ಆ ಹನ್ನೆರಡು ತಿಂಗಳುಗಳ ವಿನ್ಯಾಸವನ್ನು ಬದಲಿಸಲಿಲ್ಲ.
12 ತಿಂಗಳುಗಳೇ ಏಕೆ ಉಳಿದುಕೊಂಡವು?

ವಿಶ್ವದ ಹಲವು ಸಂಸ್ಕೃತಿಗಳು ತಮ್ಮದೇ ಆದ ಚಾಂದ್ರಮಾನ ಅಥವಾ ಸೌರಮಾನ ಪದ್ಧತಿಗಳನ್ನು ಹೊಂದಿದ್ದರೂ, ವಸಾಹತುಶಾಹಿ ಮತ್ತು ಆಡಳಿತಾತ್ಮಕ ಅನುಕೂಲಗಳಿಂದಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಜಾಗತಿಕವಾಗಿ ನೆಲೆನಿಂತಿತು. 12 ಎಂಬ ಸಂಖ್ಯೆಯನ್ನು 2, 3, 4 ಮತ್ತು 6 ರಿಂದ ಸುಲಭವಾಗಿ ಭಾಗಿಸಬಹುದಾಗಿದ್ದು, ವರ್ಷವನ್ನು ಅರ್ಧ ಅಥವಾ ತ್ರೈಮಾಸಿಕಗಳಾಗಿ ವಿಂಗಡಿಸಲು ಅತ್ಯಂತ ಪ್ರಾಯೋಗಿಕವಾಗಿದೆ.
ಕ್ಯಾಲೆಂಡರ್ ಇತಿಹಾಸದುದ್ದಕ್ಕೂ ಹಲವು ಸುಧಾರಣೆಗಳು ನಡೆದರೂ, ಹಿಂದಿನಿಂದ ಬಂದ 12 ತಿಂಗಳ ಮೂಲ ಚೌಕಟ್ಟನ್ನು ಯಾರೂ ಬದಲಿಸಲು ಹೋಗಲಿಲ್ಲ; ಬದಲಾಗಿ ಅದರ ಸುತ್ತಲಿನ ದಿನಗಳ ಲೆಕ್ಕಾಚಾರವನ್ನಷ್ಟೇ ತಿದ್ದುತ್ತಾ ಬಂದಿದ್ದರಿಂದ ಹನ್ನೆರಡು ತಿಂಗಳುಗಳ ವ್ಯವಸ್ಥೆ ಇಂದಿಗೂ ಶಾಶ್ವತವಾಗಿ ಉಳಿದುಕೊಂಡಿದೆ.












