ಸುದ್ದಿಒನ್

ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ದೇಶದ ಹಲವಾರು ರಾಜ್ಯಗಳಲ್ಲಿ ಸರ್ಕಾರ ರಚಿಸಿರುವ ಭಾರತೀಯ ಜನತಾ ಪಕ್ಷದ ಮುಂದಿನ ಅಧ್ಯಕ್ಷ ಯಾರು ಎಂಬ ಪ್ರಶ್ನೆ ಈಗ ಕುತೂಹಲಕಾರಿಯಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ನಂತರ ಅವರ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದನ್ನು ನೋಡಲು ಪಕ್ಷ ಹಾಗೂ ದೇಶದ ಇಡೀ ರಾಜಕೀಯ ಸಮುದಾಯ ಕಾಯುತ್ತಿದೆ. ಈ ಹಿನ್ನೆಲೆಯಲ್ಲಿ, ಮಾರ್ಚ್ 15 ರೊಳಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ತಮಿಳುನಾಡು, ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ಈ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪಕ್ಷದ ಹೈಕಮಾಂಡ್ ಈಗಾಗಲೇ ರಾಜ್ಯ ಉಸ್ತುವಾರಿಗಳಿಗೆ ಉನ್ನತ ಹುದ್ದೆಗೆ ಪ್ರಸ್ತಾವಿತ ಹೆಸರುಗಳನ್ನು ಸಲ್ಲಿಸುವಂತೆ ಕೇಳಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಇದುವರೆಗೆ ಯಾರ ಹೆಸರೂ ಪ್ರಸ್ತಾಪವಾಗಿಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಳ್ಳಲು, ಆ ವ್ಯಕ್ತಿಗೆ ಆರ್‌ಎಸ್‌ಎಸ್‌ನ ಅನುಮೋದನೆ ಇರಬೇಕು. ಬಿಜೆಪಿ ಮತ್ತು ಆರೆಸ್ಸೆಸ್‌ನ ಸಿದ್ಧಾಂತವನ್ನು ತಿಳಿದಿರುವ, ಆ ಸಿದ್ಧಾಂತವನ್ನು ನಂಬುವ ಮತ್ತು ಅನುಸರಿಸುವ ವ್ಯಕ್ತಿಗೆ ಮಾತ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ನೀಡಲಾಗುವುದು.
ಜೆಪಿ ನಡ್ಡಾ ಅವರು 2019 ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾಗಿ ಪಕ್ಷದ ಜವಾಬ್ದಾರಿಗಳನ್ನು ವಹಿಸಿಕೊಂಡರು. ಅವರು ಜನವರಿ 2020 ರಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅವರಿಗಿಂತ ಮೊದಲು, ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ನಡ್ಡಾ ಅವರು ಅಮಿತ್ ಶಾರವರಿಂದ ಜವಾಬ್ದಾರಿಯನ್ನು ವಹಿಸಿಕೊಂಡರು. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಡ್ಡಾ ಅವರ ಅವಧಿಯನ್ನು ಜೂನ್ 2024 ರವರೆಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಿದ್ದು, ಮೋದಿ ಸರ್ಕಾರದಲ್ಲಿ ಆರೋಗ್ಯ, ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆಯನ್ನು ಹೊಂದಿದ್ದಾರೆ.
ಇದೀಗ ಪಕ್ಷವು ಅವರ ಉತ್ತರಾಧಿಕಾರಿಯಾಗಲು ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಆದರೆ ಈ ಪ್ರಕ್ರಿಯೆಯು ನಿಧಾನವಾಗಿ ಮುಂದುವರಿಯುತ್ತಿದೆ. ಅತ್ಯಂತ ಪ್ರಭಾವಶಾಲಿ ಹುದ್ದೆ ಎಂದು ಪರಿಗಣಿಸಲಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇಲ್ಲಿಯವರೆಗಿನ ಬಿಜೆಪಿ ಅಧ್ಯಕ್ಷರು
ಅಟಲ್ ಬಿಹಾರಿ ವಾಜಪೇಯಿ | 1980 ರಿಂದ 1986 ರವರೆಗೆ
ಲಾಲ್ ಕೃಷ್ಣ ಅಡ್ವಾಣಿ | 1986 ರಿಂದ 1990 ರವರೆಗೆ
ಮುರಳಿ ಮನೋಹರ ಜೋಶಿ | 1991 ರಿಂದ 1993 ರವರೆಗೆ
ಲಾಲ್ ಕೃಷ್ಣ ಅಡ್ವಾಣಿ | 1993 ರಿಂದ 1998 ರವರೆಗೆ
ಕುಶಾಭೌ ಠಾಕ್ರೆ | 1998 ರಿಂದ 2000 ರವರೆಗೆ
ಬಂಗಾರು ಲಕ್ಷ್ಮಣ್ | 2000 ರಿಂದ 2001 ರವರೆಗೆ
ಕೆ ಜಾನಾ ಕೃಷ್ಣಮೂರ್ತಿ | 2001 ರಿಂದ 2002 ರವರೆಗೆ
ವೆಂಕಯ್ಯ ನಾಯ್ಡು | 2002 ರಿಂದ 2004 ರವರೆಗೆ
ಲಾಲ್ ಕೃಷ್ಣ ಅಡ್ವಾಣಿ | 2004 ರಿಂದ 2005
ರಾಜನಾಥ್ ಸಿಂಗ್ | 2005 ರಿಂದ 2009 ರವರೆಗೆ
ನಿತಿನ್ ಗಡ್ಕರಿ | 2010 ರಿಂದ 2013 ರವರೆಗೆ
ರಾಜನಾಥ್ ಸಿಂಗ್ | 2013 ರಿಂದ 2014 ರವರೆಗೆ
ಅಮಿತ್ ಶಾ | 2014 ರಿಂದ 2017 ಮತ್ತು 2017 ರಿಂದ 2020 ರವರೆಗೆ
ಜೆಪಿ ನಡ್ಡಾ | 2020 ರಿಂದ – ಇಲ್ಲಿಯವರೆಗೆ

